ಯುವಕರಿಗೆ ಮಹಾಂತೇಶ ಬೀಳಗಿ ಸ್ಫೂರ್ತಿ

KannadaprabhaNewsNetwork |  
Published : Nov 27, 2025, 02:00 AM IST
ಗಬತಜಕ | Kannada Prabha

ಸಾರಾಂಶ

ಬಡತನ ಮೆಟ್ಟಿ ನಿಂತು ಕಠಿಣ ಅಭ್ಯಾಸ ಐಎಎಸ್ ಅಧಿಕಾರಿಯಾದ ಮಹಾಂತೇಶ ಬೀಳಗಿ ಅವರು ನಡೆದ ಬಂದ ಹಾದಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾಹಿತಿ ಸಂಗ್ರಹ: ವೀರೇಶ ಎಸ್‌. ಉಳ್ಳಾಗಡ್ಡಿ

ನೀನು ಬಡವನಾಗಿ ಹುಟ್ಟಿದರೆಅದು ನಿನ್ನ ತಪ್ಪಲ್ಲ, ಆದರೆನೀನು ಬಡವನಾಗಿ ಸತ್ತರೆಅದು ಖಂಡಿತ ನಿನ್ನದೇ ತಪ್ಪು­ಬಡವನಾಗಿ ಹುಟ್ಟುವುದು ಸಹಜ ಅದರಲ್ಲಿ ಯಾರ ತಪ್ಪು ಇಲ್ಲ, ಆದರೆ ಬಡವ ಎಂಬ ಕಾರಣವನ್ನು ಇಟ್ಟುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ಕಷ್ಟ ಪಟ್ಟು ಓದಿ ಉನ್ನತ ಹುದ್ದೆ ಪಡೆಯಬೇಕು ಎಂಬುದು ಈ ಗಾದೆ ಮಾತಿನ ಅರ್ಥ. ಈ ಗಾದೆ ಮಾತು ಹೇಳಲು ಕಾರಣವೇನೆಂದರೆ, ಈಗ ನಾನು ನಿಮಗೆ ತಿಳಿಸಲು ಹೊರಟಿರುವ ಅಧಿಕಾರಿ ಯಶೋಗಾಥೆ ಈ ಗಾದೆ ಮಾತಿಗೆ ಹೋಲಿಕೆಯಾಗುತ್ತದೆ. ಅವರು ಕೂಡ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ಕಠಿಣ ಅಭ್ಯಾಸ ಮಾಡಿ ಐಎಎಸ್‌ ಹುದ್ದೆ ಪಡೆದು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅವರೇ ಮಹಾಂತೇಶ ಬೀಳಗಿ. ಇವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬೆಸ್ಕಾಂನಲ್ಲಿಯೂ ಕೂಡ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿದಿದ್ದಾರೆ. ದಾವಣಗೆರೆ ಮತ್ತು ಉಡುಪಿಯಲ್ಲಿ ಜಿಲ್ಲಾಧಿಕಾರಿ, ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಕಡು ಬಡತನದಲ್ಲಿ ಹುಟ್ಟಿ ಬಹಳ ಕಠಿಣ ಮಾಡಿ ಐಎಎಸ್‌ ಹುದ್ದೆ ಪಡೆದಿದ್ದರು. ಇವರಿಂದ ಪ್ರೇರಣೆ ಪಡೆದ ಹಲವು ಯುವಕರು ಕಠಿಣ ಅಭ್ಯಾಸ ಮಾಡಿ ಸರ್ಕಾರಿ ಹುದ್ದೆ ಪಡೆದಿದ್ದಾರೆ. ಆದರೆ ದುರ್ದೈವಿ ಸಂಗತಿ ಮಂಗಳವಾರ ಮಹಾಂತೇಶ ಬೀಳಗಿ ಅವರು ಕಲಬುರಗಿ ಜಿಲ್ಲೆಯೆ ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್‌ ಬಳಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇವರು ನಡೆದು ಬಂದ ಹಾದಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ 1974ರ ಮಾರ್ಚ್‌ 27ರಂದು ಜನಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ರಾಮದುರ್ಗದಲ್ಲಿ ಪೂರ್ಣಗೊಳಿದ್ದಾರೆ. ಪದವಿವರೆಗೂ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಓದಿದ್ದರು. 2012ರ ಕರ್ನಾಟಕ ಕೆಡರ್ ಬ್ಯಾಚ್ ನ ಐಎಎಸ್‌ ಅಧಿಕಾರಿಯಾದರು. ಇವರ ತಂದೆ ಗುರುಬಸಪ್ಪ ಬೀಳಗಿ ಅವರು ರಾಮದುರ್ಗದಲ್ಲೇ ಚಹಾಪುಡಿ ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು.

ಕಷ್ಟದ ಜೀವನದಲ್ಲಿಯೂ ಛಲ ಬಿಡದೇಓದಿ ಕೆಎಎಸ್ ಪಾಸ್ ಆದ ಸಾಧಕ: ಮಹಾಂತೇಶ್‌ ಅವರು 5 ವರ್ಷದವರಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಕುಟುಂಬದ ನಿರ್ವಹಣೆಯನ್ನು ಹೊತ್ತವರು ಅವರ ತಾಯಿ. ಕುಟುಂಬ ನಿರ್ವಹಣೆಗಾಗಿ ಅವರ ತಾಯಿ ಬೇರೆಯವರ ಮನೆಯಲ್ಲಿ ಕೂಲಿ ಕೆಲಸ ಮಾಡಿದರು. ಜಾತ್ರೆಯಲ್ಲಿ ರೊಟ್ಟಿ ವ್ಯಾಪಾರ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಹೀಗಾಗಿ, ವಿದ್ಯಾರ್ಥಿ ಜೀವನದಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು, ವಿದ್ಯಾಭ್ಯಾಸ ಮಾಡಿದರು. ಕಷ್ಟದ ಜೀವನದಲ್ಲಿಯೂ ಛಲ ಬಿಡದೇ ಓದಿ ಕೆಎಎಸ್ ಪಾಸ್ ಮಾಡಿದರು.

ಉನ್ನತ ಹುದ್ದೆಯಲ್ಲಿದ್ದರೂ ಯುವಕರಿಗೆ ಉಚಿತವಾಗಿ ಇಂಗ್ಲೀಷ್‌ ಹೇಳಿ ಕೊಡುತ್ತಿದ್ದರು: ಅವರು ಉನ್ನತ ಅಧಿಕಾರಿಯಾಗುವ ಮೊದಲು 1989-90ರಲ್ಲಿ ಸರ್ಕಾರಿ ಟ್ರಿಜರಿಯಲ್ಲಿ ಆಫೀಸರ್‌ ಆಗಿ ಕೆಲಸ ಮಾಡುತ್ತಿದ್ದರು. ಇದರ ಜತೆಗೆ ಧಾರವಾಡದಲ್ಲಿ ಸಿ-ಡೆಲ್‌ ಎಂಬ ಕೋಚಿಂಗ್‌ ಸೆಂಟರ್‌ ಕೂಡ ಆರಂಭಿಸುತ್ತಾರೆ. ಉನ್ನತ ಹುದ್ದೆಗೆ ಏರಿದ ಮೇಲೆ ಕೋಚಿಂಗ್‌ ಸೆಂಟರ್‌ನಲ್ಲಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂಗ್ಲೀಷ್‌ ಭಾಷೆಯನ್ನು ಉಚಿತವಾಗಿ ಹೇಳಿ ಕೊಡುತ್ತಿದ್ದರು. ಕಷ್ಟದ ಬದುಕಿನಲ್ಲೂ ಶ್ರಮದಿಂದ ಓದಿ ಉನ್ನತ ಹುದ್ದೆಗೆ ಏರಿದ ಮಹಾಂತೇಶ ಬೀಳಗಿ ಅವರು ತಮ್ಮ ಕೆಲಸಗಳಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಜನಸ್ನೇಹಿ ಅಧಿಕಾರಿಯಾಗಿ, ಭಾವುಕ ವ್ಯಕ್ತಿಯಾಗಿ ಮಹಾಂತೇಶ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಇವರ ತಾಯಿ ಸರ್ಕಾರದಿಂದ ₹25 ವಿಧವಾ ವೇತನ ಪಡೆಯಲು ತಹಸೀಲ್ದಾರ್‌ರಿಗೆ ₹100 ಲಂಚ ಕೊಟ್ಟಿದ್ದರಂತೆ. ಇದು ಮಹಾಂತೇಶ ಅವರಿಗೆ ಗೊತ್ತಾಗುತ್ತದೆ. ಈ ಘಟನೆ ಅವರ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಅಂದೆ ಅವರು ನಾನು ಕೂಡ ಒಬ್ಬ ಉನ್ನತ ಹುದ್ದೆ ಅಲಂಕರಿಸಬೇಕು. ಇಂತಹ ಮಹಿಳೆಯರಿಗೆ ಆಸರೆಯಾಗಬೇಕು ಅಂದುಕೊಂಡರಂತೆ. ಹಾಗೆಂದು ಸಾಕಷ್ಟು ಕಾರ್ಯಕ್ರಮಗಳಲ್ಲಿ ಮಹಾಂತೇಶ ಬೀಳಗಿ ಅವರು ತಮ್ಮ ಬದುಕಿನ ಸಂಕಷ್ಟ ಪರಿಸ್ಥಿತಿಗಳನ್ನು ತೆರೆದಿಟ್ಟಿದ್ದರು. ಮಹಾಂತೇಶ್‌ ಅವರು ಈ ಹಿಂದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅಪರ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆ ಡಿಸಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.ಕೆಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್‌ : ಮಹಾಂತೇಶ ಬೀಳಗಿ ಅವರು ಬಾಲ್ಯದಿಂದಲೂ ಚಾಣಾಕ್ಷರಾಗಿದ್ದರು. ಓದಿನಲ್ಲಿ ಸದಾ ಮುಂದಿದ್ದರು. ಮುಂದೆ ಜೀವನದಲ್ಲಿ ದೊಡ್ಡ ಹುದ್ದೆ ಪಡೆಯಬೇಕೆಂದು ಗುರಿ ಇಟ್ಟುಕೊಂಡಿದ್ದರು. ಅದರಂತೆಯೇ ತಮ್ಮ ಗುರಿಯನ್ನು ತಲುಪಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು. ನಂತರ ಐಎಎಸ್‌ಗೆ ಬಡ್ತಿ ಪಡೆದುಕೊಂಡಿದ್ದರು. ಉನ್ನತ ಹುದ್ದೆಯಲ್ಲಿದ್ದರೂ ಮಹಾಂತೇಶ ಬೀಳಗಿ ಅವರ ಹಣೆಯಲ್ಲಿ ಸದಾ ವಿಭೂತಿ ಇರುತ್ತಿತ್ತು. ಅಷ್ಟೇ ಶಿಸ್ತು ಕೆಲಸದಲ್ಲಿಯೂ ಇತ್ತು. ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಅವರು ನಂಬಿದ್ದರು. ಆದರೀಗ ಅವರು ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದು, ರಾಮದುರ್ಗದಲ್ಲಿ ನೀರವ ಮೌನ ಆವರಿಸಿದೆ. ಕೆಂಪುಗೂಟದ ಕಾರಿನ ಕನಸು ನನಸು: ಮಹಾಂತೇಶ ಬೀಳಗಿಯವರು ಪಿಯುಸಿಯಲ್ಲಿ ಕಲಾ ವಿಭಾಗ ತೆಗೆದುಕೊಂಡಿದ್ದರಂತೆ. ಒಮ್ಮೆ ಅವರು ತಮ್ಮ ಮುಂದೆ ಕೆಂಪುಗೂಟದ ಕಾರು ಹಾದು ಹೋಗಿದ್ದನ್ನು ನೋಡಿ, ಆ ರೆಡ್‌ಲೈಟ್‌ ಕಾರಿನ ಬಗ್ಗೆ ವಿಚಾರಿಸಿದ್ದರಂತೆ. ಆಗಲೇ, ನಾನು ಮುಂದೆ ಇಂತಹ ಕಾರಿನಲ್ಲಿ ಹೋಗುವ ಅಧಿಕಾರಿಯಾಗುತ್ತೇನೆ ಎಂದು ಛಲ ತೊಟ್ಟರಂತೆ. ಈ ವಿಚಾರವನ್ನು ಅವರು ಹಲವು ಸಮಾರಂಭಗಳಲ್ಲಿ ಹೇಳಿಕೊಂಡಿದ್ದರು.

ಪಿಂಚಣಿ ಅದಾಲತ್ ಜಾರಿಗೆ ತಂದ ರೂವಾರಿ: ತಮ್ಮ ತಾಯಿ ₹25 ವಿಧವಾ ವೇತನ ಪಡೆಯಲು ₹100 ಲಂಚವಾಗಿ ನೀಡಿದ ಮೇಲೆ ಅವರ ತಾಯಿಗೆ ಅಧಿಕಾರಿಗಳು ವಿಧವಾ ವೇತನದ ಆದೇಶ ಪತ್ರ ನೀಡಿದ್ದರು. ಇದನ್ನೆಲ್ಲ ಗಮನಿಸಿದ ಅವರು ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿ ಜಿಲ್ಲಾಧಿಕಾರಿಯಾದರು. ಅವರ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದೆಂದು ಜಿಲ್ಲಾಧಿಕಾರಿಯಾದ ತಕ್ಷಣ "ಪಿಂಚಣಿ ಅದಾಲತ್ ಕಾರ್ಯಕ್ರಮ "ವನ್ನು ಜಾರಿಗೆ ತಂದಿದರು. ಇದರ ಉದ್ದೇಶ ತಹಸೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು, ಇದರ ಅರ್ಥ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದಾಗಿದೆ. ಇದರಿಂದ ಹಲವು ಅಂಗವಿಕಲರು, ವಿಧವೆಯರು, ವೃದ್ಧರಿಗೆ ಅನುಕೂಲವಾಗಿದೆ. ಈಗಲೂ ಪಿಂಚಣಿ ಅದಾಲತ್ ಕಾರ್ಯಕ್ರಮ ಮುಂದುವರೆದಿದೆ.

...........

ಮಹಾಂತೇಶ ಬೀಳಗಿ ಅವರು ಅದ್ಭುತ ಮನುಷ್ಯ. ಹಾಸ್ಯ ಪ್ರಜ್ಣೆಯಿಂದ ಎಲ್ಲರನ್ನೂ ನಗುಸುತ್ತಿದ್ದರು. ಲವಲವಿಕೆಯಿಂದ ಇದ್ದ ವ್ಯಕ್ತಿ. ಅವರು ಬಡತನದಲ್ಲಿದ್ದರು ಕಠಿಣ ಅಭ್ಯಾಸ ಮಾಡಿ ಐಎಎಸ್‌ನಂತಹ ಉನ್ನತ ಹುದ್ದೆಯನ್ನು ಅಲಂಕರಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಬಡವರಿಗೆ ಫೀಸ್‌ ಇಲ್ಲದೆ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ.ರವಿ ಎಸ್‌, ಪತ್ರಕರ್ತರು

PREV

Recommended Stories

2 ಕಾರ್ಯಕ್ರಮದಲ್ಲಿ ಮುಖಾಮುಖಿ ಭೇಟಿ ತಪ್ಪಿಸಿಕೊಂಡ ಸಿದ್ದು-ಡಿಕೆಶಿ
ಸಿದ್ದುವೇ ಇರಲಿ, ಇಲ್ಲವೇ ಪರಂ ಸಿಎಂ ಆಗಲಿ: ರಾಜಣ್ಣ ಆಶಯ