ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಮಹಾರಾಷ್ಟ್ರ ತಕರಾರು ತಗೆದಿರುವುದು ಸರಿಯಲ್ಲ ಎಂದು ಬಸವನ ಬಾಗೇವಾಡಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಹುಲ್ ಕುಬಕಡ್ಡಿ ಒತ್ತಾಯಿಸಿದ್ದಾರೆ.೧೯೬೪ರಲ್ಲಿ ಪ್ರಾರಂಭವಾಗಿರುವ ಆಲಮಟ್ಟಿ ಜಲಾಶಯಕ್ಕಾಗಿ ಈ ಭಾಗದ ಅವಳಿ ಜಿಲ್ಲೆಯ ಸಾವಿರಾರು ರೈತರು ಲಕ್ಷಾಂತರ ಎಕರೆ ಫಲವತ್ತಾದ ಭೂಮಿ ಕಳೆದುಕೊಂಡಿದ್ದಾರೆ. ಇಲ್ಲಿರುವ ಮನೆ, ಮಠಗಳನ್ನು ಕಳೆದುಕೊಂಡು ತಮ್ಮ ಅಸ್ತಿತ್ವ ಮುಡಿಪಾಗಿಟ್ಟು ಅನೇಕ ಕುಟುಂಬಗಳು ಬೀದಿಗೆ ಬಂದಿರುವುದಲ್ಲದೇ ಸಂಪೂರ್ಣ ನೀರಾವರಿ ಆದರೆ ಮುಂದಿನ ಪೀಳಿಗೆಗಾದರೂ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವುದಾಗಿ ಮಹಾದಾಸೆ ಇಟ್ಟುಕೊಂಡಿದ್ದರು. ಆಲಮಟ್ಟಿ ಜಲಾಶಯ ಎತ್ತರಗೊಳಿಸುವುದನ್ನು ಮಹಾರಾಷ್ಟ್ರ ಸರ್ಕಾರ ತೀವ್ರ ವಿರೋಧಿಸಿ, ಇತ್ತೀಚಿಗೆ ನಡೆದ ಮಹಾರಾಷ್ಟ್ರದ ಸದನದಲ್ಲಿ ಸುಪ್ರೀಂ ಕೋರ್ಟಗೆ ದೂರು ಸಲ್ಲಿಸಲು ನಿರ್ಣಯಿಸಲಾಗಿದೆ. ಕೇಂದ್ರದ ಮೇಲೆ ಒತ್ತಡ ತರಲು ತಯಾರಿ ಮಾಡುತ್ತಿರುವುದು ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಗಳು ನೀರಿನಲ್ಲಿ ಮುಳಗುತ್ತೆ ಎಂದು ತಂಟೆ ತಕರಾರು ಮಾಡುತ್ತಿರುವುದು ಖಂಡನೀಯ ಎಂದರು.
ಈ ವಿಷಯವಾಗಿ ನ್ಯಾಯಮೂರ್ತಿ ಬ್ರಿಜೇಶ್‌ಕುಮಾರ ವರದಿ ಸೇರಿದಂತೆ ಎಲ್ಲಾ ಸಮೀಕ್ಷೆ ಹಾಗೂ ವರದಿಗಳು ಸೇರಿದಂತೆ ಪ್ರತಿಷ್ಠಿತ ಕಂಪನಿಯಿಂದ ಹೈಡ್ರಾಲಾಜೀಕಲ್ ಸರ್ವೇ ಮಾಡಿ ವರದಿ ಕೂಡಾ ಮಹಾರಾಷ್ಟ್ರದ ಯಾವುದೇ ಪ್ರದೇಶಕ್ಕೂ ನಷ್ಟ ಆಗುವುದಿಲ್ಲ ಎಂದು ನೀಡಿದೆ. ಮಹಾರಾಷ್ಟ್ರದ ಪ್ರವಾಹದ ಸಂದರ್ಭದಲ್ಲಿ ಕೋಯ್ನಾದಿಂದ ನಮ್ಮ ರಾಜ್ಯದ ನೂರಾರು ಹಳ್ಳಿಗಳು ಜಲಾವೃತಗೊಂಡು ಅನೇಕ ಜೀವಹಾನಿ ಆಗಿ ಸಾಕಷ್ಟು ನಷ್ಟಕೂಡಾ ಅನುಭವಿಸಿದ್ದೇವೆ. ಪ್ರಕೃತಿ ವಿಕೋಪ ಹಾಗೂ ನೆರೆಯ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಂಲಗಾಣ ಎಲ್ಲ ಸಹೋದರರಂತೆ ಅನ್ಯೂನ್ಯವಾಗಿ ಸಹಕಾರದಿಂದ ಬದುಕಿ ಬಾಳಬೇಕು ಎನ್ನುವ ಉನ್ನತ್ತವಾದ ವಿಚಾರದಿಂದ ನಾವೂ ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಮಹಾರಾಷ್ಟ್ರ ಪದೇ ಪದೇ ಗಡಿ, ಭಾಷೆ, ನೀರಿನ ವಿಚಾರವಾಗಿ ಈ ರೀತಿ ತಕರಾರು ಮಾಡುವುದು ಸರಿಯಲ್ಲ ಎಂದರು.ಒಂದು ವೇಳೆ ಇದು ಮುಂದುವರೆದರೆ ಕರ್ನಾಟದ ಎಲ್ಲಾ ಶ್ರೀಗಳು, ರೈತಪರ, ಕನ್ನಡಪರ, ಸೇರಿದಂತೆ ಸಮಸ್ತ ಪ್ರಗತಿಪರ ಸಂಘನೆಗಳ ಮಹಾ ಒಕ್ಕೂಟದಿಂದ ತಕ್ಕ ಪಾಠ ಕಲಿಸಲಾಗುವುದು ಎಂದು ರಾಹುಲ ಕುಬಕಡ್ಡಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.