ಕನ್ನಡಪ್ರಭ ವಾರ್ತೆ ಕೊಡೇಕಲ್
ಬಸವಸಾಗರ ಜಲಾಶಯದ ಹಿನ್ನೀರು ವ್ಯಾಪ್ತಿ ಸೇರಿ ಕೃಷ್ಣಾ ನದಿ ತೀರ ಪ್ರದೇಶಗಳಲ್ಲಿ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಹೀಗಾಗಿ 3500 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ದಿನೇದಿನೆ ಜಲಾಶಯದಲ್ಲಿರುವ ನೀರು ಸಂಗ್ರಹ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದು, ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದಂತಾಗಿದೆ
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಪ್ರದೇಶ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಯಾದಗಿರಿ ಮಾತ್ರವಲ್ಲದೇ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳು ಸೇರಿದಂತೆ ಬಸವಸಾಗರ ಹಿನ್ನೀರನ್ನು ಕುಡಿಯುವ ನೀರು, ಬೃಹತ್ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ಮತ್ತು ಏತ ನೀರಾವರಿಯಿಂದ ನೀರು ಬಳಸಿಕೊಂಡು ಕೃಷಿಗೆ ನೀರಾವರಿ ಸೇರಿದಂತೆ ಉದ್ಯಮಗಳಿಗೆ ಬೇಡಿಕೆ ಹಾಗೂ ಅಗತ್ಯ ನೀರನ್ನು ಒದಗಿಸಲು ಈ ಬೃಹತ್ ಜಲಾಶಯವೇ ಜಲಮೂಲವಾಗಿದೆ.ಐಸಿಸಿ ಸಭೆ ಕರೆಯುವಂತೆ ಶಾಸಕರ ಮನವಿ:
ಕಳೆದ ಬಾರಿ ಬರದಿಂದ ತತ್ತರಿಸಿದ್ದ ರೈತಾಪಿ ವರ್ಗಕ್ಕೆ ನಿಗದಿತ ಸಮಯಕ್ಕೆ ನೀರು ಹರಿಬಿಟ್ಟು ರೈತರ ಹಿತಕಾಪಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ದಿನಾಂಕ ನಿಗದಿ ಪಡಿಸಿ ಈ ಭಾಗದ ರೈತರ ಕೃಷಿಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಹಾಭಲೇಶ್ವರ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಲ್ಲಿ ಮಾತ್ರ ಆಲಮಟ್ಟಿ ಮತ್ತು ನಾರಾಯಣಪುರದ ಉಭಯ ಜಲಾಶಯಗಳು ಶೀಘ್ರದಲ್ಲಿಯೇ ಭರ್ತಿಯಾಗಲಿದ್ದು, ಈಗಾಗಲೇ ಉತ್ತಮ ಮುಂಗಾರು ಮಳೆಯಾಗಿರುವುದರಿಂದ ಜಲಾಶಯಗಳು ಶೀಘ್ರವೇ ಭರ್ತಿಯಾಗುವ ನಿರೀಕ್ಷೆಗಳಿವೆ.