ಮಹಾರಾಷ್ಟ್ರದ ಭಾರೀ ಮಳೆಗೆ ಭೀಮಾ ತೀರ ತತ್ತರ : ಭೀಕರ ಪ್ರವಾಹದ ಪರಿಸ್ಥಿತಿ

KannadaprabhaNewsNetwork |  
Published : Sep 25, 2025, 01:00 AM IST
ಕಕಕಕಕ | Kannada Prabha

ಸಾರಾಂಶ

ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭೀಮಾ ತೀರದಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ತತ್ತರಗೊಂಡಿವೆ.

  ಬೆಂಗಳೂರು : ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭೀಮಾ ತೀರದಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ತತ್ತರಗೊಂಡಿವೆ.

ಮಹಾರಾಷ್ಟ್ರದ ಉಜನಿ, ವೀರ ಭಟ್ಕರ್‌, ಸೀನಾ ಹಾಗೂ ಭೋರಿ ಜಲಾಶಯಗಳಿಂದ ಭೀಮಾ ನದಿಗೆ 2.90 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನಲ್ಲಿ ಭೀಮಾ ಉಪನದಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟೆ-ವಿಜಯಪುರ ರಾಜ್ಯ ಹೆದ್ದಾರಿ ಸಂಪರ್ಕದ ಸೇತುವೆ ಜಲಾವೃತಗೊಂಡಿದೆ. ಇಬ್ಬರು ಈ ಸೇತುವೆ ದಾಟುವ ಸಮಯದಲ್ಲಿ ಬುಧವಾರ ಬೈಕ್ ಸಮೇತವಾಗಿ ಕೊಚ್ಚಿಕೊಂಡು ಹೋಗಿದ್ದು, ಆ ಪೈಕಿ ಒಬ್ಬ ಈಜಿ ದಡ ಸೇರಿದ್ದಾನೆ. ಇನ್ನೊಬ್ಬ ಬೈಕ್ ಸವಾರ ಸಂತೋಷ ಹಡಪದ (32) ಎಂಬುವರು ಕೊಚ್ಚಿಕೊಂಡು ಹೋಗಿದ್ದಾರೆ.

ಕಲಬುರಗಿ ಜಿಲ್ಲೆಯ 94 ಹಳ್ಳಿಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜನರ ಸುರಕ್ಷತೆಗಾಗಿ 100 ಕಾಳಜಿ ಕೇಂದ್ರ, 40 ಗೋಶಾಲೆ ತೆರೆಯಲಾಗಿದೆ. ಮಳೆ, ಪ್ರವಾಹಕ್ಕೆ ಭೀಮಾ ತೀರದ ಜಿಲ್ಲೆಗಳ ವ್ಯಾಪ್ತಿಯಲ್ಲಿ 2.10 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ.

ನೆರೆಯಿಂದಾಗಿ ಕರ್ನಾಟಕ-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿ ನಡುವಿನ ಸಂಪರ್ಕ ಕಡಿತಗೊಂಡಿದೆ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿಜಯಪುರ-ಸೋಲಾಪೂರ ರಾಷ್ಟ್ರೀಯ ಹೆದ್ದಾರಿ ಕೂಡ ಬಂದ್‌ ಆಗಿದೆ.

ನೆರೆಯಿಂದಾಗಿ ಚೆನ್ನೈ-ಮುಂಬೈ, ಬೆಂಗಳೂರು-ಮುಂಬೈ ಉದ್ಯಾನ ಎಕ್ಸ್‌ಪ್ರೆಸ್‌, ಬೆಂಗಳೂರು-ದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್‌ ಸೇರಿ ಹಲವು ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಕಲಬುರಗಿ-ಕೊಲ್ಹಾಪುರ, ಕೊಲ್ಹಾಪುರ ಎಕ್ಸ್‌ಪ್ರೆಸ್‌, ಕಲಬುರಗಿ -ಬೀದರ್ ಪ್ಯಾಸೆಂಜರ್ ಡೆಮೋ ಸೇರಿ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ರೈಲು ಪ್ರಯಾಣಿಕರು ಪರದಾಡುವಂತಾಗಿದೆ.

PREV
Read more Articles on

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ