ಶ್ರದ್ಧಾಭಕ್ತಿಯಿಂದ ಜರುಗಿದ ಚೇಳ್ಳಗುರ್ಕಿ ಎರ್ರಿತಾತನವರ ಮಹಾರಥೋತ್ಸವ

KannadaprabhaNewsNetwork |  
Published : Jun 13, 2024, 12:45 AM IST
ಸ | Kannada Prabha

ಸಾರಾಂಶ

ರಥೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮಠದ ಮುಂಭಾಗದಲ್ಲಿ ಮಡಿತೇರು ಎಳೆಯಲಾಯಿತು.

ಬಳ್ಳಾರಿ: ತಾಲೂಕಿನ ಚೆಳ್ಳಗುರ್ಕಿ ಗ್ರಾಮದಲ್ಲಿ ಎರ್ರಿತಾತನವರ ಮಹಾರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ರಥೋತ್ಸವ ಹಿನ್ನೆಲೆಯಲ್ಲಿ ಶ್ರೀಮಠವನ್ನು ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು. ಬೆಳಿಗ್ಗೆಯಿಂದಲೇ ಮಠದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.

ರಥೋತ್ಸವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮಠದ ಮುಂಭಾಗದಲ್ಲಿ ಮಡಿತೇರು ಎಳೆಯಲಾಯಿತು. ಎರ್ರಿತಾತನವರ ಮೂರ್ತಿಗೆ ವಿಶೇಷ ಪೂಜೆ ನಡೆಸಿದ ಬಳಿಕ ಮೂರ್ತಿಯನ್ನು ತೇರಿನಲ್ಲಿಟ್ಟು ಭಕ್ತ ಸಮೂಹದ ಜಯಘೋಷಗಳೊಂದಿಗೆ ಮಡಿತೇರನ್ನು ಎಳೆದು ಸಂಪನ್ನಗೊಳಿಸಲಾಯಿತು. ಜೋಳದರಾಶಿ ಗುಂಡಯ್ಯಶಾಸ್ತ್ರಿಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.

ಸಂಜೆ 5.30ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ದೊರೆಯಿತು. ಮಠಾಧೀಶರು ಹಾಗೂ ಗ್ರಾಮದ ಮುಖಂಡರು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ಬಳ್ಳಾರಿ ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶದ ನೂರಾರು ಜನ ಭಕ್ತ ಸಮೂಹ ರಥವನ್ನು ಎದುರು ಬಸವಣ್ಣನವರೆಗೆ ಎಳೆದು ತಂದರಲ್ಲದೆ, ಬಳಿಕ ಅದೇ ಸ್ಥಳಕ್ಕೆ ನಿಲ್ಲಿಸಿದರು. ನಿರಂತರವಾಗಿ ಸುರಿದ ಮಳೆಯ ನಡುವೆ ಭಕ್ತರು ತೇರನ್ನು ಎಳೆದು ಭಕ್ತಿ ಸಮರ್ಪಿಸಿ, ಪುನೀತಗೊಂಡರು. ಸಂಜೆ 7 ಗಂಟೆಗೆ ಶ್ರೀ ಎರ್ರಿತಾತನವರಿಗೆ ಕರ್ಪೂದಾರತಿ ಜರುಗಿತು.

ರಥೋತ್ಸವ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು. 18 ವರ್ಷದ ಮೇಲ್ಪಟ್ಟವರು ರಕ್ತದಾನ ಮಾಡಿದರು. ರಥೋತ್ಸವ ಹಿನ್ನಲೆಯಲ್ಲಿ ಜೂ.5ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂದಿ ಧ್ವಜಾರೋಹಣ, ಸಪ್ತಭಜನೆ, ಜೂ.6ರಂದು ಬೆಳ್ಳಿ ರಥೋತ್ಸವ ಹಾಗೂ ಬಸವ ಉತ್ಸವ ನಡೆದಿದ್ದು, ಬುಧವಾರ ಬೆಳಿಗ್ಗೆ ಸಪ್ತಭಜನೆ ಮುಕ್ತಾಯಗೊಂಡಿತು. ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳ ಸಪ್ತಭಜನೆ ತಂಡಗಳು ಪಾಲ್ಗೊಂಡಿದ್ದವು.

ರಥೋತ್ಸವಕ್ಕೆ ಬರುವ ಸಹಸ್ರಾರು ಭಕ್ತರಿಗೆ ಮಠದ ದಾಸೋಹ ಟ್ರಸ್ಟ್‌ ವತಿಯಿಂದ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಸಂಜೆ ಶ್ರೀಎರ್ರಿತಾತನವರ ಹೂವಿನ ರಥೋತ್ಸವ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್‌ ಅಧ್ಯಕ್ಷ ಬಾಳನಗೌಡ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ