ಹರಪನಹಳ್ಳಿ: ಮಹಾ ಕಾವ್ಯ ರಾಮಾಯಣ ರಚಿಸುವ ಮೂಲಕ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ ಎಂದು ಇಲ್ಲಿಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮತೆ, ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ ಮುಂತಾದ ಮಾನವೀಯ ಮೌಲ್ಯಗಳನ್ನು ನೀಡಿ ಮನುಕುಲ ಉದ್ಧಾರಕ್ಕೆ ಶ್ರಮಿಸಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಅರಸಿಕೇರಿ ವೈ.ಡಿ. ಅಣ್ಣಪ್ಪ ಮಾತನಾಡಿ, ಹರಪನಹಳ್ಳಿ ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡಿರುವ ವಾಲ್ಮೀಕಿ ಭವನವನ್ನು ಶೀಘ್ರ ಉದ್ಘಾಟಿಸಲಾಗುವುದು. ಆ ಸಂದರ್ಭದಲ್ಲಿ ಸಮಾಜದ ವತಿಯಿಂದ ಅದ್ಧೂರಿಯಾಗಿ ವಾಲ್ಮೀಕಿ ಜಯಂತಿ ಆಚರಿಸೋಣ ಎಂದು ಹೇಳಿದರು.ವಿಶೇಷ ಉಪನ್ಯಾಸ ನೀಡಿದ ಪಿಡಿಒ ಮಾರುತೇಶ ಶ್ರೀರಾಮನ ಆದರ್ಶವನ್ನು ಜಗತ್ತಿಗೆ ತಿಳಿಸಿದವರು. ಮಹರ್ಷಿ ವಾಲ್ಮೀಕಿಯವರು, ನಾವು ಸರ್ವ ಜನಾಂಗದೊಳಗೊಂದಾಗಿ ಬೆಳೆಯಬೇಕು ಎಂದು ತಿಳಿಸಿದರು.
ಆಲದಹಳ್ಳಿ ಷಣ್ಮುಖಪ್ಪ, ವಾಲ್ಮೀಕಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಿ ಶಿವಯೋಗಿ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ವಾಲ್ಮೀಕಿ ಮಹರ್ಷಿಯವರ ತತ್ವ, ಮೌಲ್ಯಗಳ ಕುರಿತು ತಿಳಿಸಿದರು. ಇದಕ್ಕೂ ಪೂರ್ವದಲ್ಲಿ ಪ್ರವಾಸಿ ಮಂದಿರ ವೃತ್ತದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ತೆರೆದ ವಾಹನದಲ್ಲಿ ನಡೆಸಿದ ಮೆರವಣಿಗೆಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು.