ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಯಾಯಣ ಗ್ರಂಥವನ್ನು ಓದಿಗಷ್ಟೇ ಸೀಮಿತಗೊಳಿಸದೇ ಶ್ರೀರಾಮನ ಆದರ್ಶಗಳು, ಸೀತೆಯ ತಾಳ್ಮೆ, ಭರತನ ನಂಬಿಕೆ- ವಿಶ್ವಾಸ, ಹನುಮಂತನ ಭಕ್ತಿ ಹೀಗೆ ರಾಮಾಯಣದಲ್ಲಿ ಬರುವ ಆದರ್ಶ ವ್ಯಕ್ತಿಗಳ ಉತ್ತಮ ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ದೂರದೃಷ್ಟಿ ಉಳ್ಳವರಾಗಿದ್ದು, ಅವರು ರಚಿಸಿರುವ ಮಹಾಕಾವ್ಯ ರಾಮಾಯಣ ಇಂದಿಗೂ ಪ್ರಸ್ತುತವಾಗಿದೆ. ನಾವೆಲ್ಲರೂ ಶ್ರೀರಾಮನನ್ನು ಸ್ಮರಿಸುತ್ತೇವೆ. ಕೇವಲ ರಾಮ ರಾಮ ಎಂದರೆ ಸಾಲದು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಕುಲಕಸುಬು ಬೇಟೆಗಾರಿಕೆಯಾದರೂ ವಾಲ್ಮೀಕಿ ಅವರು ಸರ್ವಶ್ರೇಷ್ಠ ಮಹಾಕಾವ್ಯ ರಾಮಾಯಣವನ್ನು ರಚಿಸಿದ್ದಾರೆ. ಇಂತಹ ಪುಣ್ಯವ್ಯಕ್ತಿಯನ್ನು ನಾವು ಹೊಂದಿರುವುದು ನಮ್ಮ ಭಾಗ್ಯ. ರಾಷ್ಟ್ರಕವಿ ಕುವೆಂಪು ಅವರು ಸಹ ವಾಲ್ಮೀಕಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಅನೇಕ ಕವಿಗಳು ಅವರಿಂದ ಸ್ಫೂರ್ತಿ ಪಡೆದು ಕಾವ್ಯ ರಚಿಸಿದ್ದಾರೆ. ಅಲ್ಲಿ ನಾವು ಕಾಣುವ ತಾಳ್ಮೆ, ಭ್ರಾತೃತ್ವ, ಗೌರವ, ನಂಬಿಕೆ, ವಿಶ್ವಾಸ, ಭಕ್ತಿ ಹೀಗೆ ಎಲ್ಲ ಅಂಶಗಳು ನಮಗೆ ಬೇಕು. ಆ ಎಲ್ಲ ಅಂಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್.ಎಂ. ಮುತ್ತಯ್ಯ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ವೈಯಕ್ತಿಕ ಜೀವನದ ಕುರಿತು ಹುಡುಕಾಟದ ಪ್ರಯತ್ನ ಹೆಚ್ಚಾಗಬೇಕು. ಅವರ ಜೀವನದ ಮಾಹಿತಿಗಿಂತ ರಾಮಾಯಣದ ಕುರಿತು ಹೆಚ್ಚಾಗಿ ತಿಳಿದಿದ್ದೇವೆ. ವಿದ್ಯಾರ್ಥಿಗಳು ಅವರ ಇತಿಹಾಸದ ಕುರಿತು ಹುಟುಕಾಟ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು. ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ತೋರಿಸಿಕೊಟ್ಟಿದ್ದಾರೆ. ವಾಲ್ಮೀಕಿ ಅವರು ಒಂದು ಸಮಾಜಕ್ಕೆ ಮಾತ್ರ ಸೀಮಿತವಾದವರಲ್ಲ, ಅವರೊಬ್ಬ ರಾಷ್ಟ್ರಪುರುಷ. ಸರ್ವಸ್ಪರ್ಶಿ. ಎಲ್ಲವನ್ನು ಅವಲೋಕಿಸಿದಾಗ ಸತ್ಯದ ಹೂರಣ ಹೊರಗೆ ಬರುತ್ತದೆ. ಹಾಗೆಯೇ, ವಾಲ್ಮೀಕಿಯವರು ಎಲ್ಲವನ್ನು ಅವಲೋಕಿಸಿ ರಾಮಾಯಣವನ್ನು ನಮಗೆ ನೀಡಿದ್ದಾರೆ. ರಾಮನ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾವೆಲ್ಲ ಆದರ್ಶ ಪುರುಷರಾದಾಗ ಮಾತ್ರ ದೇಶ ಉದ್ಧಾರ ಆಗುತ್ತದೆ ಎಂದು ಹೇಳಿದರು. ಶಾಸಕಿ ಶಾರದಾ ಪೂರ್ಯನಾಯ್ಕ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಆದಿಕವಿಯಾಗಿದ್ದು, ಎಲ್ಲ ಸಮಾಜಕ್ಕೆ ಮಾದರಿಯಾದ ಮಹಾಕಾವ್ಯ ರಾಮಾಯಣವನ್ನು ರಚಿಸಿದ್ದಾರೆ. ಮರ್ಯಾದ ಪುರುಷ ರಾಮನ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳೋಣ. ಎಲ್ಲ ಮನುಷ್ಯರೂ ಒಂದೇ. ಎಲ್ಲರನ್ನು ಪ್ರೀತಿಸಿ, ಗೌರವದಿಂದ ಕಾಣಬೇಕೆಂದು ಈ ಮಹಾಕಾವ್ಯ ತೋರಿಸಿದೆ ಎಂದರು. ಭಾವಚಿತ್ರ ಮೆರವಣಿಗೆ: ಬೆಳಗ್ಗೆ ಸೈನ್ಸ್ ಮೈದಾನದಿಂದ ಹೊರಟ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಬಹುಮಾನ ಹಾಗೂ ಅಂತರ್ಜಾತೀಯ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾನಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಎಎಸ್‍ಪಿ ಅನಿಲ್ ಕುಮಾರ್ ಭೂಮರೆಡ್ಡಿ, ವಾಲ್ಮೀಕಿ ಸಮಾಜದ ಮುಖಂಡರಾದ ಎಸ್.ವಿ.ರಾಜು, ಲಕ್ಷ್ಮಣಪ್ಪ, ಬಿ.ಎಸ್.ನಾಗರಾಜ್, ರಾಜು, ಮಂಜಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ಮತ್ತಿತರರು ಇದ್ದರು. - - - ಕೋಟ್ಸ್ ನವೆಂಬರ್ 8ರಂದು ನಗರದ ಸೈನ್ಸ್ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು, ಯುವಜನತೆ ಮೇಳದ ಪ್ರಯೋಜನ ಪಡೆಯಬೇಕು. ಜನರ ಮನೆ ಬಾಗಿಲಿಗೆ ಬಂದು ಅಹವಾಲು ಸ್ವೀಕರಿಸುವ ಜನತಾ ದರ್ಶನವನ್ನು ಅಧಿಕಾರಿಗಳು ಕ್ಷೇತ್ರವಾರು ನಡೆಸಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕು - ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ನಮ್ಮದು ಶ್ರೇಷ್ಠ ಸಾಂಸ್ಕೃತಿಕ ದೇಶ. ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಿರುವ ದೇಶ. ರಾಮ ಭಜನೆ ನಮ್ಮ ಭಕ್ತಿ. ಅಯೋಧ್ಯೆಯಲ್ಲಿ ಬರುವ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವಿದ್ದು, ಇದು ಒಂದು ದೇವಸ್ಥಾನವಲ್ಲ, ಬದಲಾಗಿ ರಾಷ್ಟ್ರ ಮಂದಿರ - ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ಶಾಸಕ - - - ಪೊಟೋ: 28ಎಸ್ಎಂಜಿಕೆಪಿ01 ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು.