ಹೊಸಪೇಟೆ: ಮಹರ್ಷಿ ವಾಲ್ಮೀಕಿ ಯಾರಿಗೂ ಹೆದರುವ ವ್ಯಕ್ತಿಯಾಗಿರಲಿಲ್ಲ. ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಶ್ವಾಸ ಇಟ್ಟಿದ್ದರು. ಹಾಗಾಗಿ 21ನೇ ಶತಮಾನಕ್ಕೂ ಅನ್ವಯವಾಗುವಂತೆ ವಾಸ್ತವದ ಮೇಲೆ ರಾಮಾಯಣ ಬರೆದಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಸಮಾಜದ ಬಡವರಿಗೆ ಶಿಕ್ಷಣ ಹಾಗೂ ಆರೋಗ್ಯಕ್ಕೆ ನೆರವಾಗಬೇಕು. ಸಮಾಜದ ಬಡವರಿಗೆ ಶಿಕ್ಷಣ ಹಾಗೂ ಆರೋಗ್ಯದ ವಿಷಯದಲ್ಲಿ ಸರ್ಕಾರದಿಂದ ಸೌಲಭ್ಯ ಕೊಡಿಸಲು ಸಮಾಜ ಬಾಂಧವರು ಕೂಡ ಮುಂದಾಗಬೇಕು ಎಂದರು.
ವಾಲ್ಮೀಕಿ ಸಮಾಜಕ್ಕೆ ಮುಕ್ತಿ ವಾಹನ ಕೊಡಲಾಗುವುದು. ಸಮಾಜದವರು ಸ್ಮಶಾಸಕ್ಕೆ ಜಾಗ ಕೇಳಿದ್ದಾರೆ. ಆದರೆ ನಾವು ಸತ್ತಾಗ ಜಾತಿ ಭೇದ ಮಾಡುವುದು ಬೇಡ. ಹಾಗಾಗಿ ಸಾರ್ವಜನಿಕ ಸ್ಮಶಾಸನ ನಿರ್ಮಾಣ ಮಾಡೋಣ. ಎಲ್ಲ ಜಾತಿಯವರು ಈ ಸ್ಮಶಾಸನದಲ್ಲಿ ಹೂಳಲಿ, ನಿಯಮಾನುಸಾರ ಜಾಗ ನೀಡಲಾಗುವುದು. ಸಮಾಜದ ಬೇಡಿಕೆಗಳಿಗೆ ಸದಾ ಸ್ಪಂದಿಸುವೆ ಎಂದರು.ಸಮಾಜ ಸೇವಕಿ ರಾಣಿ ಸಂಯುಕ್ತ ಮಾತನಾಡಿ, ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ನಮಗೆ ಆದರ್ಶ ಗ್ರಂಥವಾಗಿದೆ. ನಾವೆಲ್ಲರೂ ಇದನ್ನು ಪಾಲನೆ ಮಾಡಬೇಕು ಎಂದರು.
ಹುಡಾ ಅಧ್ಯಕ್ಷ ಎಚ್.ಎನ್. ಇಮಾಮ್ ನಿಯಾಜಿ ಮಾತನಾಡಿ, ಸಮಾಜ ಸುಧಾರಣೆಗಾಗಿ ಮಹನೀಯರು ಅವತರಿಸುತ್ತಾರೆ. ಅವರು ನಡೆದ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು.ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ ಮಾತನಾಡಿದರು. ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ವಾಲ್ಮೀಕಿ ನಾಯಕ ಸಂಘದ ಸಹ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು, ವಾಲ್ಮೀಕಿ ನಾಯಕ ಸಮಾಜದ ಬಡವರಿಗಾಗಿ 10 ಎಕರೆ ಜಾಗ ಒದಗಿಸಬೇಕು. ಸ್ಮಶಾನಕ್ಕಾಗಿ ಐದು ಎಕರೆ ಜಾಗ ಒದಗಿಸಬೇಕು. ಬಾಲಕ, ಬಾಲಕಿಯರ ಹಾಸ್ಟೆಲ್ ಸ್ಥಾಪಿಸಬೇಕು ಎಂದು ಶಾಸಕ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಿದರು.ಎಸ್ಪಿ ಶ್ರೀಹರಿಬಾಬು, ತಹಸೀಲ್ದಾರ್ ಶ್ರುತಿ ಎಂ.ಎಂ., ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗುಜ್ಜಲ ಶ್ರೀನಾಥ್, ಮುಖಂಡರಾದ ಎಸ್.ಎಸ್. ಚಂದ್ರಶೇಖರ್, ಕಟಗಿ ಜಂಬಯ್ಯ ನಾಯಕ, ತಾರಿಹಳ್ಳಿ ವೆಂಕಟೇಶ, ಗುಜ್ಜಲ ಶ್ರೀನಾಥ, ಜೆ. ವಸಂತ ಕುಮಾರ, ತಾರಿಹಳ್ಳಿ ಜಂಬುನಾಥ, ಗೋಸಲ ಭರಮಪ್ಪ, ಕಣ್ಣಿ ಶ್ರೀಕಂಠ, ನೀರಲಗಿ ಕರೆ ಹನುಮಂತ, ಕಿನ್ನಾಳ್ ಹನುಮಂತ, ಗುಡಿ ಗುಡಿ ಸೋಮನಾಥ, ಬಾಣದ ಸಂತೋಷ, ಬೆಳಗೋಡ ಅಂಬಣ್ಣ ಸೇರಿದಂತೆ ಏಳುಕೇರಿ ಯಜಮಾನರು, ಅಧಿಕಾರಿಗಳು ಇದ್ದರು. ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾವಂತರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.