ಕೊಟ್ಟೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ

KannadaprabhaNewsNetwork |  
Published : Mar 09, 2024, 01:30 AM IST
ಮಹಾಶಿವರಾತ್ರಿಯ ದಿನವಾದ ಶುಕ್ರವಾರ ಕೊಟ್ಟೂರಿನ ಗದ್ದಿಕಲ್ಲೇಶ್ವರ ಈಶ್ವರ ಲಿಂಗಮೂರ್ತಿಗೆ ಮಹಿಳೆಯರು ಮತ್ತು ಪುರುಷರು ಪೂಜಾ ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಿಸಿದರು. | Kannada Prabha

ಸಾರಾಂಶ

ಉಜ್ಜಯಿನಿ ಸದ್ದರ್ಮ ಪೀಠದಲ್ಲೂ ಮಹಾಶಿವರಾತ್ರಿಯ ಸಡಗರ, ಸಂಭ್ರಮ ಕಂಡುಬಂತು.

ಕೊಟ್ಟೂರು: ಶುಕ್ರವಾರದ ಮಹಾಶಿವರಾತ್ರಿ ಹಬ್ಬ ಇದೀಗ ಕೊಟ್ಟೂರಿನಲ್ಲಿ ಸಾಗಿರುವ ಕೊಟ್ಟೂರೇಶ್ವರ ಜಾತ್ರೆಯ ಸಡಗರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.

ಕೊಟ್ಟೂರೇಶ್ವರನ ಜಪತಪ ಹಾಡುಗಳ ಮಾರ್ಧನಿ ಪಟ್ಟಣದೆಲ್ಲೆಡೆ ಕಳೆದ ವಾರದಿಂದ ಮೊಳಗುತ್ತಿದ್ದರೆ ಶುಕ್ರವಾರ ಕೊಟ್ಟೂರಿನಲ್ಲಿ ಇದರೊಟ್ಟಿಗೆ ಶಿವನಾಮ ಜಪ, ಓಂ ನಮಃ ಶಿವಾಯ ಮಂತ್ರಗಳ ಘೋಷಣೆ ಕೇಳಿ ಬಂದು ಆಸ್ತಿಕ ಭಕ್ತರ ಧಾರ್ಮಿಕ ಕೈಂಕರ್ಯಗಳಿಗೆ ಮುದ ನೀಡಿತು.

ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ಎಂದಿನಂತೆ ಉದ್ದನೆಯ ಸಾಲಿನೊಂದಿಗೆ ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಿ ಭಕ್ತಿ ಸಮರ್ಪಿಸುವುದು ಬೆಳಗಿನಿಂದ ನಡೆದೇಯಿದೆ. ಬೆಳಗಿನ ಜಾವ ಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆಚರಣೆಗೊಂಡಿತು. ಸ್ವಾಮಿಯ ಮೂರು ಪ್ರಮುಖ ಮಠಗಳಾದ ಹಿರೇಮಠ, ತೊಟ್ಟಿಲು ಮಠ, ಗಚ್ಚಿನಮಠಗಳಿಗೆ ದಂಡು ದಂಡಾಗಿ ಭಕ್ತರು ತೆರಳಿ ಪೂಜೆ ಸಲ್ಲಿಸಿದರು.

ಇಲ್ಲಿನ ಈಶ್ವರ ದೇವಸ್ಥಾನಗಳಾಗಿರುವ ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠಲಿಂಗೇಶ್ವರ, ಚಂದ್ರಮೌಳೇಶ್ವರ, ಮಾರ್ಕಂಡೇಶ್ವರ, ೧೦೮ ಶಿವಲಿಂಗಗಳ ದೇವಸ್ಥಾನ, ಸೋಮಲಿಂಗೇಶ್ವರ, ರಾಮಲಿಂಗೇಶ್ವರ, ಹ್ಯಾಳ್ಯಾದ ಬಳಿಯ ಪಂಪಾಪತಿಪತೇಶ್ವರ, ಅಂಬಳಿಯ ಕಲ್ಲೇಶ್ವರ ಗುಡಿಗಳಿಗೆ ಭಕ್ತರು ಶುಕ್ರವಾರ ಬೆಳಗ್ಗೆಯಿಂದಲೇ ತೆರಳಿ ನಿರಂತರ ರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಕುಟುಂಬ ಸಮೇತರಾಗಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಪಟ್ಟಣದ ಗದ್ದಿ ಕಲ್ಲೇಶ್ವರ ದೇವಸ್ಥಾನದ ಈಶ್ವರ ಲಿಂಗಮೂರ್ತಿಗೆ ಶುಕ್ರವಾರ ರಾತ್ರಿಯುದ್ದಕ್ಕೂ ಮಹಾರುದ್ರಾಭಿಷೇಕ ಕೈಂಕರ್ಯವನ್ನು ಸಿದ್ಧತೆ ನಿರಂತರ ಸಾಗಿದೆ.

ತಾಲೂಕಿನ ಉಜ್ಜಯಿನಿ ಸದ್ದರ್ಮ ಪೀಠದಲ್ಲೂ ಮಹಾಶಿವರಾತ್ರಿಯ ಸಡಗರ, ಸಂಭ್ರಮ ಹೆಚ್ಚಾಗಿ ಕಂಡುಬಂತು. ರಾತ್ರಿ ಸದ್ದರ್ಮ ಪೀಠದ ಒಡೆಯ ಮಹಾಮರುಳಸಿದ್ದ ಸ್ವಾಮಿಯ ಲಿಂಗಮೂರ್ತಿಗೆ ವಿಶೇಷ ಪೂಜಾ ಮಹಾರುದ್ರಾಭಿಷೇಕ ಕೈಂಕರ್ಯ ನೆರವೇರಿದವು. ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ಮರುಳಸಿದ್ದೇಶ್ವರ ಸ್ವಾಮಿಯ ಮೂಲ ಮೂರ್ತಿಗೆ ಮಹಾರುದ್ರಾಭಿಷೇಕದೊಂದಿಗೆ ಕ್ಷೀರವನ್ನು ಎರೆದು ವಿವಿಧ ಪೂಜೆ ಸಲ್ಲಿಸಿದರು. ಭಜನೆ ಮತ್ತು ಶಿವಕೀರ್ತನೆಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ