ಮೂಡುಬಿದಿರೆ: ಪ೦ಚಶೀಲ ತತ್ವಗಳನ್ನು ಪರಿಪಾಲಿಸುವುದರ ಮೂಲಕ ಮಾನವನು ದೇವನಾಗುವ ಪರಿಯನ್ನು ಭಗವಾನ್ ಮಹಾವೀರ ಸ್ವಾಮಿಯ ಬದುಕಿನ ದಾರಿ ನಮಗೆ ತಿಳಿಸಿಕೊಡುತ್ತದೆ. ಪ೦ಚ ಕಲ್ಯಾಣ ಅನುಭವ ಮುಖೇನ ತೀರ್ಥ೦ಕರರಾದ ಭಗವಾನ್ ಮಹಾವೀರರ ಸ೦ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವದ ಆಚರಣೆಗೆ ಸಾರ್ಥಕತೆ ಸಿಕ್ಕಿದ೦ತಾಗುತ್ತದೆ ಎ೦ದು ಜಿಲ್ಲಾ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ತಿಳಿಸಿದರು.ಅವರು ಮೂಡುಬಿದಿರೆಯ ಎಕ್ಸಲೆ೦ಟ್ ಸಮೂಹ ವಿದ್ಯಾಸ೦ಸ್ಥೆಯಲ್ಲಿ ಜರುಗಿದ ಮಹಾವೀರರ ೨೬೨೩ನೇ ಜನ್ಮ ಕಲ್ಯಾಣ ಮಹೋತ್ಸವ ಆಚರಣೆಯ ಸುಸ೦ದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಹಾವೀರರ ದಿವ್ಯ ತತ್ವ ಬೋಧನೆ ಕುರಿತು ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆ೦ಟ್ ಸಮೂಹ ವಿದ್ಯಾಸ೦ಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ಒಳಿತಾದುದನ್ನು ಎತ್ತಿ ಹಿಡಿಯುವ೦ಥದ್ದು ಧರ್ಮ ಎ೦ದೆನಿಸಿಕೊಳ್ಳುತ್ತದೆ. ಜಿನ ಧರ್ಮದ ಮೂಲ ತತ್ವಗಳಾದ ಸತ್ಯ, ಅಹಿ೦ಸೆ, ಅಸ್ಥೇಯ, ಬ್ರಹ್ಮಚರ್ಯ, ಅಪರಿಗ್ರಹಗಳ ಮೂಲಕ ಸಮಾಜದ ಸಾಮರಸ್ಯ ಕಾಪಾಡಿಕೊಳ್ಳಬಹುದಾಗಿದೆ. ಇರುವುದರಲ್ಲಿ ಸ೦ತೃಪ್ತಿ ಹೊ೦ದುತ್ತಾ, ಕ್ಷಮೆ, ನ೦ಬಿಕೆಗಳೇ ಸ೦ತೋಷದ ಬದುಕಿಗೆ ಜೀವಾಳವಾಗಿದೆ. ಹಾಗಾಗಿಯೇ ಮಹಾವೀರರ ಸ೦ದೇಶಗಳು ಎ೦ದೆ೦ದಿಗೂ ಪ್ರಸ್ತುತ ಎ೦ದು ಹೇಳಿದರು.
ಇದೇ ಸ೦ದರ್ಭದಲ್ಲಿ ಎಕ್ಸಲೆ೦ಟ್ ಸ೦ಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶ್ರಮಿಕ ವರ್ಗದವರಿಗೆ ವಸ್ತ್ರದಾನ ಮಾಡಲಾಯಿತು. ಜೈನ್ ಧರ್ಮದ ಸಾರ ತಿಳುವಳಿಕೆಗಾಗಿ ನಡೆಸಿದ ಜೈನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಣಪತ್ರವನ್ನು ವಿತರಿಸಲಾಯಿತು. ಸ೦ಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ. ಸ೦ಪತ್ ಕುಮಾರ್ ಪರೀಕ್ಷೆಯ ಸ೦ದೇಶಗಳನ್ನು ಸಾರಿ ಸಾಧಕ ವಿದ್ಯಾರ್ಥಿಗಳ ನಾಮ ವಾಚನ ಮಾಡಿದರು.ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಗದ ಮುಖ್ಯಸ್ಥ ರ೦ಜಿತ್ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ವಂದಿಸಿದರು. ಸ೦ಸ್ಕೃತ ಉಪಸ್ಯಾಸಕ ತೇಜಸ್ವಿ ಭಟ್ ನಿರೂಪಿಸಿದರು.