ಮಹಾವೀರರ ಸತ್ಯ, ಅಹಿಂಸೆ, ತ್ಯಾಗದ ಸಂದೇಶ ಸಾರ್ವಕಾಲಿಕ: ಶಶಿಕಲಾ ಮಾಳಗಿ

KannadaprabhaNewsNetwork | Published : Apr 11, 2025 12:34 AM

ಸಾರಾಂಶ

ಜಗತ್ತಿನಾದ್ಯಂತ ಭಗವಾನ ಮಹಾವೀರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರೂ ಸತ್ಯ ಹಾಗೂ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು.

ಹಾವೇರಿ: ಭಗವಾನ್ ಮಹಾವೀರರ ಸತ್ಯ, ಅಹಿಂಸೆ, ತ್ಯಾಗದ ಸಂದೇಶ ಸಾರ್ವಕಾಲಿಕ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ತಿಳಿಸಿದರು.ನಗರದ ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಗವಾನ ನೇಮಿನಾಥ ದಿಗಂಬರ ಜೈನ ಮಂದಿರ ಕಮಿಟಿ ಸಹಯೋಗದಲ್ಲಿ ನಡೆದ ಭಗವಾನ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನಾದ್ಯಂತ ಭಗವಾನ ಮಹಾವೀರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರೂ ಸತ್ಯ ಹಾಗೂ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದರು.ತಹಸೀಲ್ದಾರ್ ಶರಣಮ್ಮ ಮಾತನಾಡಿ, ಜೈನ ಧರ್ಮ ಶ್ರೇಷ್ಠ ಧರ್ಮವಾಗಿದೆ. ಕನ್ನಡ ಭಾಷೆ ಶ್ರೀಮಂತಿಕೆಗೆ ಜೈನ ಧರ್ಮ ಪ್ರಮುಖವಾಗಿದೆ. ಆದಿಕವಿ ಪಂಪ ಜೈನ ಧರ್ಮದ ಆಚಾರ, ವಿಚಾರ, ಮೌಲ್ಯಗಳನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ. ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಎಲ್ಲರೂ ಸಹಬಾಳ್ವೆ ಪ್ರತಿಪಾದಿಸಿದ್ದಾರೆ. ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಬಿಟ್ಟಹೋಗಬೇಕು. ಆ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಶೋಣ ಎಂದರು.ಸುಷ್ಮಾ ರತ್ನಾಕರ ಕಳಸೂರ ಭಗವಾನ್ ಮಹಾವೀರ ಅವರ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಸದಸ್ಯೆ ಜೈರಾಬಿ ಖಾಜಿ, ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷ ಮಂಜಪ್ಪ ತಡಸದ, ಭಗವಾನ ನೇಮಿನಾಥ ದಿಗಂಬರ ಜೈನ್ ಮಂದಿರ ಕಮಿಟಿ ಅಧ್ಯಕ್ಷ ಚಂದ್ರನಾಥ ಕಳಸೂರ, ಭಾರತೀಯ ಜೈನ ಮಿಲನ ದಾವಣಗೆರೆ ವಿಭಾಗದ ಪ್ರಧಾನ ಕಾರ್ಯದರ್ಶಿ ಭರತರಾಜ ಹಜಾರಿ ಹಾಗೂ ಕರ್ನಾಟಕ ಜೈನ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎ. ವಜ್ರಕುಮಾರ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು. ವಿಮಲ್ ಭೋಗಾರ ನಿರೂಪಿಸಿ, ವಂದಿಸಿದರು.ಮೆರವಣಿಗೆಗೆ ಚಾಲನೆ: ಭಗವಾನ್ ಮಹಾವೀರ ಜಿನಬಿಂಬ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.ಪ್ರೀತಿಯ ಮೂಲಕ ವಿಶ್ವವನ್ನೇ ಗೆದ್ದ ದಿವ್ಯಪುರುಷ

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ಭಗವಾನ ಮಹಾವೀರ ಜಯಂತಿ ಆಚರಿಸಲಾಯಿತು.

ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮುಖಂಡರು, ಸತ್ಯ, ಅಹಿಂಸೆ, ಕ್ಷಮೆ ಮುಂತಾದ ಮಾನವೀಯ ಮೌಲ್ಯಗಳ ನೆಲೆಯಲ್ಲಿ ಧಾರ್ಮಿಕ ಚಿಂತನೆಗಳನ್ನು ಪ್ರಚುರಪಡಿಸಿ ಪ್ರೀತಿಯ ಮೂಲಕ ವಿಶ್ವವನ್ನೇ ಗೆದ್ದ ದಿವ್ಯಪುರುಷ ಭಗವಾನ ಮಹಾವೀರರ ಬದುಕು ಮತ್ತು ಬೋಧನೆಗಳು ಸರ್ವಕಾಲಕ್ಕೂ ಆದರಣೀಯ. ಮಹಾವೀರರ ಚಿಂತನೆಗಳು ಭಾಷಣಗಳಿಗೆ ಸೀಮಿತವಾಗದೇ ಬದುಕಿನ ಭಾಗವಾಗಬೇಕಿದೆ. ವಿಶ್ವಪ್ರೇಮ, ಭ್ರಾತೃತ್ವಗಳು ಸಮಾಜವನ್ನು ಬೆಸೆಯಬೇಕಿದೆ. ಯುದ್ಧ ಮಾಡದೇ ಜಗತ್ತು ಹೇಗೆ ಗೆಲ್ಲಬಹುದು ಎಂದು ಬದುಕಿ ತೋರಿಸಿಕೊಟ್ಟ ಮಹಾವೀರರ ಶಾಂತಿ, ಅಹಿಂಸೆ ಮತ್ತು ಸಮಾನತೆಯ ಮಂತ್ರವನ್ನು ನಾವೆಲ್ಲರೂ ಪಾಲಿಸುವ ಸಂಕಲ್ಪ ಮಾಡೋಣ ಎಂದರು.ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂತೋಷ ದುಂಡಣ್ಣನವರ, ಮುಖಂಡರಾದ ನಾಗಯ್ಯ ಹಿರೇಮಠ, ನಾಗಣ್ಣ ನಡುವಿನಮನಿ, ರಾಜೇಂದ್ರ ಜಿನ್ನಣ್ಣವರ, ಶ್ರೀಕಾಂತ ದುಂಡಣ್ಣವರ, ನಾಗರಾಜ ಬೊಮ್ಮಣ್ಣವರ, ವರ್ಧಮಾನ ಮಂತಗಿ, ಸುರೇಶ ನಡುವಿನಮನಿ, ಅಶೋಕ ಕಾಡನವರ, ರಾಜಕುಮಾರ ಶಿರಪಂತಿ, ಅರುಣ ಉಮ್ಮಣ್ಣನವರ, ಶೇಖರ ಹರಿಜನ, ಪ್ರಕಾಶ ನಾಯ್ಕ ಇತರರು ಇದ್ದರು.

Share this article