ಸಮಾಜವನ್ನು ಸತ್ಯ-ಶಾಂತಿಯ ಕಡೆ ಮುನ್ನಡೆಸಿದ ಮಹಾವೀರ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork | Published : Apr 11, 2025 12:33 AM

ಸಾರಾಂಶ

ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ ಐದು ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಸತ್ಯ ಮತ್ತು ಶಾಂತಿಯ ಕಡೆಗೆ ಸಮಾಜವನ್ನು ಕೊಂಡೊಯ್ದ ಮಹಾನ್ ಚೇತನ ವರ್ಧಮಾನ ಮಹಾವೀರ ಎಂದು ಜಿಲ್ಲಾಕಾರಿ ಡಾ.ಕುಮಾರ ಬಣ್ಣಿಸಿದರು.

ನಗರದ ಜೈನರ ಬೀದಿಯಲ್ಲಿರುವ ಶ್ರೀಅನಂತನಾಥಸ್ವಾಮಿ ದೇವಾಲಯ (ದಿಗಂಬರ ಜೈನ ಬಸದಿ) ವತಿಯಿಂದ ನಡೆದ ಮಹಾವೀರ ಜಯಂತಿ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಜಗತ್ತಿಗೆ ಆಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ ೨೪ನೇ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ ಎಂದರು.

ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ ಐದು ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

ಮಹಾವೀರರು ಕರುಣೆ, ನೈತಿಕತೆ ಮತ್ತು ಅಹಿಂಸೆಯನ್ನು ಪ್ರತಿಬಿಂಬಿಸುವುದರ ಜೊತೆಗೆ ಸತ್ಯಘಿ, ಕ್ಷಮೆ ಮತ್ತು ಭೌತಿಕತೆಯಿಂದ ನಿರ್ಲಿಪ್ತತೆಯ ಮಾರ್ಗವನ್ನು ಅನುಸರಿಸುವ ಮೂಲಕ ಸರಳ ಮತ್ತು ಶಾಂತಿಯುತ ಜೀವನ ಸಾಗಿಸಿದವರು ಎಂದು ಬಣ್ಣಿಸಿದರು.

ತಮ್ಮ ೩೦ನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಹುಡುಕುತ್ತಾ ತಮ್ಮ ಐಷಾರಾಮಿ ಜೀವನವನ್ನು ತ್ಯಜಿಸಿ ೧೨ ವರ್ಷಗಳ ತೀವ್ರ ಧ್ಯಾನ ಮತ್ತು ತಪಸ್ಸಿನ ನಂತರ, ಅವರು ಕೇವಲ ಜ್ಞಾನ ಪಡೆದು ತಮ್ಮ ಜೀವನದ ಉಳಿದ ಭಾಗವನ್ನು ಅಹಿಂಸೆ, ಸತ್ಯ ಮತ್ತು ಸ್ವಯಂ ಶಿಸ್ತಿನ ಬೋಧನೆಗಳನ್ನು ಹರಡಲು ಕಳೆದರು ಎಂದು ವಿವರಿಸಿದರು.

ಮಹಾವೀರರು ಸನ್ಯಾಸವನ್ನು ಸ್ವೀಕರಿಸಿ ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ತಪಸ್ವಿಯಾಗಿದ್ದರು ಎಂದರು.

ನಗರದ ಜೈನ ದೇವಾಲಯದಿಂದ ಆರಂಭವಾದ ಮಹಾವೀರರ ಮೆರವಣಿಗೆ ವಿಶ್ವೇಶ್ವರಯ್ಯ ರಸ್ತೆ, ವಿವೇಕಾನಂದ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಮತ್ತೆ ದೇವಾಯಕ್ಕೆ ತೆರಳಿ ಸಂಪನ್ನಗೊಂಡಿತು. ಮೆರವಣಿಗೆಯ ಮಾರ್ಗದುದ್ದಕ್ಕು ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜೈನ ಸಮುದಾಯದ ಅಧ್ಯಕ್ಷ ಶಾಂತಿ ಪ್ರಸಾದ್ ಜೈನ್, ಜೈನ ಸಮುದಾಯದ ಮುಖಂಡರುಗಳಾದ ರಾಕೇಶ್ ಜೈನ್, ಶ್ರೀಧರ್‌ಜೈನ್, ಶಶಿಧರ್ ಜೈನ್, ಪದ್ಮನಾಭ ಜೈನ್ ಸೇರಿದಂತೆ ಹಲವಾರು ಮುಖಂಡರು ಸಮಾರಂಭ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮಹಾವೀರರ ಜಯಂತಿ ಅಂಗವಾಗಿ ಶ್ರೀ ಅನಂತನಾಥ ಜೈನ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತಾದಿಗಳು ಮಹಾವೀರರ ದರ್ಶನ ಪಡೆದು ಪುನೀತರಾದರು.

Share this article