ಹಾವೇರಿ: ಇತ್ತೀಚಿನ ದಿನಗಳಲ್ಲಿ ಅನೇಕ ದುಶ್ಚಟಗಳಿಗೆ ದಾಸರಾಗಿ ಯುವ ಜನತೆ ದಾರಿ ತಪ್ಪುತ್ತಿದೆ. ಯುವಕರನ್ನು ಸಂಘಟಿಸಿ ಮಹಾಯೋಗಿ ವೇಮನರ ವಚನಗಳನ್ನು, ತತ್ವಗಳನ್ನು ಅವರು ಮಾಡಿರುವ ಸಾಧನೆಗಳನ್ನು ತಿಳಿ ಹೇಳುವ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯುವ ಜನತೆಯನ್ನು ಸರಿ ದಾರಿಗೆ ತರುವ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ನೆಹರೂ ಓಲೇಕಾರ ಹೇಳಿದರು.ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ 614ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಾಯೋಗಿ ವೇಮನರು ನೇರವಾಗಿ ಮತ್ತು ನಿರ್ಭಯವಾಗಿ ತಮಗೆ ತೋಚಿದ್ದನ್ನು ಆಡುವ ಸ್ವಭಾವದವರು. ಮಾನವೀಯ ಮೌಲ್ಯಗಳು, ಆತ್ಮಗೌರವ, ಸಮಾನತೆ ಮತ್ತು ಸಮಾಜಮುಖಿ ಚಿಂತನೆಗಳು ಅವರ ಪದ್ಯಗಳಲ್ಲಿ ಸಹಜವಾಗಿ ಹರಿದು ಬರುತ್ತವೆ. ಜಾತಿ ಪದ್ಧತಿಯನ್ನು ಖಂಡಿಸಿದವರು. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದ ಮಹಾನ್ ಯೋಗಿಗಳು. ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಜನಸಾಮಾನ್ಯರ ಕವಿಯಾದ ಮಹಾಯೋಗಿ ವೇಮನರು ಜಾತೀಯತೆ ಅಂಧ, ಶ್ರದ್ಧೆ, ಮೇಲು ಕೀಲುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಸಮಾಜ ಸುಧಾರಕರಾಗಿ, ಕ್ರಾಂತಿಕಾರಿಯಾಗಿ ನೀಡಿದ ಕೊಡುಗೆ ಅಪಾರವಾದದ್ದು. ಅಸಾಧಾರಣ ವೇಮನರ ತತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಿಸಬೇಕಾಗಿದೆ. ಮಹಾಯೋಗಿ ವೇಮನರು ಜೀವನವೆಲ್ಲ ನಶ್ವರವೆನ್ನಿಸಿ ನಾಡಿನ ತುಂಬೆಲ್ಲ ಸಂಚರಿಸಿ ಲೋಕಜ್ಞಾನವನ್ನು ಹರಡುತ್ತಾರೆ, ವಚನಗಳ ಸತ್ಯವನ್ನು ಪ್ರತಿಪಾದಿಸಿ ತಮ್ಮ ಸಾಧನೆಯಿಂದ ಮಹಾಯೋಗಿಯಾಗುತ್ತಾರೆ. ಈ ವೇಮನರ ಜಿಲ್ಲಾ ಸಮುದಾಯ ಭವನವನ್ನು ನಿರ್ಮಿಸಲು ಎಲ್ಲರೂ ಸೇರಿ ಕೈಜೋಡಿಸಬೇಕೆಂದು ಹೇಳಿದರು.ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಕಾಂತೇಶರೆಡ್ಡಿ ಗೋಡಿಹಾಳ ಮಾತನಾಡಿ, ನಮ್ಮೊಳಗಿನ ಛಲವನ್ನು ಜಾಗೃತಗೊಳಿಸಿ, ಸ್ವಾಭಿಮಾನದ ಬದುಕಿಗೆ ದಾರಿ ತೋರಿದ ಮಹಾನ್ ಚಿಂತಕ ಶ್ರೀ ವೇಮನರ ಜಯಂತಿಯನ್ನು ಪ್ರತಿವರ್ಷ ಜ.19ರಂದು ಗೌರವದಿಂದ ಆಚರಿಸುತ್ತಿದ್ದೇವೆ. ವೇಮನರು ಕೇವಲ ಕವಿ ಅಥವಾ ತತ್ವಜ್ಞರಲ್ಲ, ಅವರು ಸಮಾಜದ ಅಂತರಾಳವನ್ನು ತಟ್ಟಿ ಎಚ್ಚರಿಸಿದ ಯೋಗಿ, ಸುಳ್ಳು, ಮೂಢನಂಬಿಕೆ, ಅನ್ಯಾಯಗಳ ವಿರುದ್ಧ ನೇರವಾಗಿ ಮಾತನಾಡಿದ ಮಹಾನುಭಾವರು ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ತಹಸೀಲ್ದಾರ ಶರಣಮ್ಮ, ಜಿಲ್ಲಾಧಿಕಾರಿಗಳ ಕಚೇರಿಯ ಅಮೃತಗೌಡ ಪಾಟೀಲ, ಜಿಲ್ಲಾ ರೆಡ್ಡಿ ಜನಸಂಘ ಕಾರ್ಯದರ್ಶಿ ವಿ.ಜಿ. ದೊಡ್ಡಗೌಡ್ರ ಸೇರಿದಂತೆ ಸಮಾಜದ ಬಾಂಧವರು ಇದ್ದರು.