ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ಯಾಂಪಸ್‌ನಲ್ಲಿ ವಿಶ್ವ ಪರಿಸರ ದಿನವನ್ನು ಶುಕ್ರವಾರ ಆಚರಿಸಲಾಯಿತು. ವಿಶ್ವಸಂಸ್ಥೆಯ ‘ಹವಾಮಾನ ಸಂರಕ್ಷಣೆಗಾಗಿ ಜಾಗತಿಕ ಕರೆ’ ಎಂಬ ಆಶಯದಡಿ ನಡೆದ ಈ ಅಭಿಯಾನದಲ್ಲಿ ಮಾಹೆಯ ಉನ್ನತ ಅಧಿಕಾರಿಗಳು, ಬೋಧಕರು, ಸ್ಥಳೀಯ ಶಾಲೆ ಮತ್ತು ಕಾಲೇಜುಗಳ ಸುಮಾರು 2000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಿಡವೊಂದನ್ನು ನೆಟ್ಟು ಮಾತನಾಡಿದ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, ‘ಇಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳ ಜವಾಬ್ದಾರಿ ಕೇವಲ ತರಗತಿ ಹಾಗೂ ಪಠ್ಯಕ್ರಮಗಳಿಗಷ್ಟೇ ಸೀಮಿತವಾಗಿಲ್ಲ. ಹವಾಮಾನ ಬದಲಾವಣೆ ಎಂಬುದು ಕೇವಲ ಚರ್ಚೆಯ ವಿಷಯವಾಗಿ ಉಳಿದಿಲ್ಲ, ಅದು ನಾವು ಎದುರಿಸುತ್ತಿರುವ ಕಹಿ ಸತ್ಯ. ಪರಿಸರ ಪ್ರಜ್ಞೆ ಎಂಬುದು ನಮ್ಮ ದೈನಂದಿನ ಆಲೋಚನೆ ಮತ್ತು ಜೀವನಶೈಲಿಯ ಭಾಗವಾಗಬೇಕು ಎಂದು ಕರೆ ನೀಡಿದರು.
‘ಹಸಿರು ಮೆರವಣಿಗೆ’ಯು ಮಾಹೆಯ ಮುಖ್ಯ ಕಚೇರಿಯಿಂದ ಹೊರಟ ಒಂದೂವರೆ ಕಿಮಿ ಸಾಗಿ, ಎಂಡ್ ಪಾಯಿಂಟ್ ಪ್ರವೇಶ ದ್ವಾರದ ಬಳಿ ಮುಕ್ತಾಯಗೊಂಡಿತು. ವಿವಿಯ ಕ್ಯಾಂಪಸ್‌ನಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರು ಆವರಣ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ‘ವನಮಹೋತ್ಸವ’ವನ್ನು ಆಚರಿಸಲಾಯಿತು.