ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ವಾಕ್ವರೆಲಿ ಸಿಮಾಂಡ್ಸ್ ಜಾಗತಿಕ ವಿಶ್ವವಿದ್ಯಾನಿಲಯಗಳ ಶ್ರೇಯಾಂಕ (ರ‍್ಯಾಂಕಿಂಗ್) ಪಟ್ಟಿಯಲ್ಲಿ ಗಮನಾರ್ಹ ಸ್ಥಾನ ಪಡೆದಿದೆ.ಜಗತ್ತಿನಾದ್ಯಂತ 150 ವಿಶ್ವವಿದ್ಯಾನಿಲಯಗಳು ಶ್ರೇಯಾಂಕವನ್ನು ಪಡೆದುಕೊಂಡಿದ್ದು, ಅಂಗರಚನಾ ಶಾಸ್ತ್ರ (ಅನಾಟಮಿ) ಮತ್ತು ಶರೀರ ಶಾಸ್ತ್ರ (ಫಿಸಿಯಾಲಜಿ) ವಿಭಾಗಗಳಲ್ಲಿ ಭಾರತದಿಂದ ಕೇವಲ ಮಾಹೆ ಮಾತ್ರ ಶ್ರೇಯಾಂಕವನ್ನು ಪಡೆದುಕೊಂಡಿದೆ.
ಲೈಫ್ ಸೈನ್ಸಸ್ (ಜೀವ ವಿಜ್ಞಾನ) ವಿಭಾಗದಲ್ಲಿ ಮಾಹೆ ಕಳೆದ ವರ್ಷ 368ನೇ ಸ್ಥಾನದಲ್ಲಿತ್ತು. ಈ ವರ್ಷ 317ನೇ ಸ್ಥಾನ ಪಡೆದಿದೆ. ವೈದ್ಯಕೀಯ ವಿಭಾಗದಲ್ಲಿಯೂ ಶ್ರೇಯಾಂಕದ ಮಟ್ಟ ಹೆಚ್ಚಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ 200 ಪಟ್ಟಿಗಳಲ್ಲಿ ಮೂರು ಕಿರಿದು ವಿಷಯಗಳು (ನ್ಯಾರೋ ಸಬ್ಜೆಕ್ಟ್ಸ್) ಸೇರಿಕೊಂಡಿವೆ. ಅವುಗಳೆಂದರೆ, ದಂತ ವೆದ್ಯಕೀಯ, ಅಂಗರಚನಾಶಾಸ್ತ್ರ (ಅನಾಟಮಿ) ಮತ್ತು ಔಷಧ ವಿಜ್ಞಾನ (ಫಾರ್ಮಸಿ ಮತ್ತು ಫಾರ್ಮಕಾಲಜಿ).ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಹಾಗೂ ಕಂಪ್ಯೂಟರ್ ಸಾಯನ್ಸ್ ಮತ್ತು ಇನ್‌ಫಾರ್ಮೇಶನ್ ಸಿಸ್ಟಮ್ಸ್‌ನಲ್ಲಿ 680ರಿಂದ 151ನೇ ಸ್ಥಾನಕ್ಕೇರಿದೆ. ಜೀವ ವಿಜ್ಞಾನ ಮತ್ತು ವೈದ್ಯಕೀಯ ಹಾಗೂ ದೇಹರಚನಾಶಾಸ್ತ್ರ ಮತ್ತು ಶರೀರ ಶಾಸ್ತ್ರದಲ್ಲಿ 150ರಿಂದ 101ನೇ ಸ್ಥಾನ, ಜೀವಶಾಸ್ತ್ರೀಯ ವಿಜ್ಞಾನದಲ್ಲಿ 500ರಿಂದ 451ನೇ ಸ್ಥಾನ, ದಂತ ವೈದ್ಯಕೀಯದಲ್ಲಿ 100ರಿಂದ 51ನೇ ಸ್ಥಾನ, ಔಷಧಿ ಶಾಸ್ತ್ರದಲ್ಲಿ 250ರಿಂದ 201, ಔಷಧ ವಿಜ್ಞಾನ ವಿಭಾಗದಲ್ಲಿ 200ರಿಂದ 151, ರಸಾಯನ ಶಾಸ್ತ್ರದಲ್ಲಿ 650ರಿಂದ 601ನೇ ಸ್ಥಾನಕ್ಕೇರಿದೆ.
ಕ್ವಾಕ್ವರೆಲಿ ಸಿಮಾಂಡ್ಸ್ ಜಾಗತಿಕ ವಿದ್ಯಾನಿಲಯ ಶ್ರೇಯಾಂಕದ 20ನೇ ಆವೃತ್ತಿ ಇದಾಗಿದ್ದು, ಜಗತ್ತಿನ ಒಟ್ಟು 104 ದೇಶಗಳಿಂದ 1,500 ಸಂಸ್ಥೆಗಳು ಭಾಗವಹಿಸಿದ್ದವು. ಈ ಪ್ರತಿಷ್ಠಿತ ಶ್ರೇಯಾಂಕ ಆವೃತ್ತಿಯಲ್ಲಿ ಉದ್ಯೋಗಶೀಲ ಯೋಜನೆ ಮತ್ತು ಸುಸ್ಥಿರತೆಗೆ ಒತ್ತು ನೀಡಲಾಗುತ್ತದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.