ಹರಪನಹಳ್ಳಿ: ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪಟ್ಟಣದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಬುಧವಾರ ಪೊರಕೆ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಹೊಸ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಆರಂಭಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಮಹಿಳೆಯರ ಬಗ್ಗೆ ಕೀಳಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಅವರ ವಿರುದ್ಧ ದಿಕ್ಕಾರ ಎಂದು ಘೋಷಣೆ ಕೂಗಿದರು.ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೆಗ್ ಹಾಕುತ್ತಾರೆ ಎಂಬ ಹೇಳಿಕೆ ಖಂಡಿಸಿದ ಅವರು, ಮಹಿಳೆಯರಿಗೆ ಕುಮಾರಸ್ವಾಮಿ ಹಾಗೂ ಸಂಜಯ ಪಾಟೀಲ್ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಪುರಾತನ ಕಾಲದಿಂದಲೂ ಮಹಿಳೆಯರ ಬಗ್ಗೆ ಗೌರವ ಭಾವನೆ ಇದೆ. ಇವತ್ತಿನ ಕೆಟ್ಟ ರಾಜಕಾರಣದಲ್ಲಿ ಕುಮಾರಸ್ವಾಮಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದರಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದರೆ ಏನು ಅರ್ಥ ಎಂದು ಅವರು ಪ್ರಶ್ನಿಸಿದರು. ಇಂತಹ ತುಚ್ಛ ಮಾತುಗಳನ್ನಾಡಿದ ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ ಕ್ಷೇತ್ರದ ಮಹಿಳಾ ಮತದಾರರರು ಈ ಬಗ್ಗೆ ಚುನಾವಣೆಯಲ್ಲಿ ಅವರಿಗೆ ಉತ್ತರ ನೀಡಬೇಕು ಎಂದು ಕೋರಿದರು.
ಗೃಹಲಕ್ಷ್ಮಿ ಯೋಜನೆಯ ₹ 2 ಸಾವಿರದಿಂದ ಮಹಿಳೆಯರು ತಮ್ಮ ಮಕ್ಕಳ ಸಾಲ ಶುಲ್ಕ ಕಟ್ಟುತ್ತಾರೆ. ಹಾಲು, ಸ್ವಲ್ಪ ಮಟ್ಟಿನ ದಿನಸಿ ತರುತ್ತಾರೆ ಎಂದು ಹೇಳಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರಿಗೆ ಎಷ್ಟು ಪೆಗ್ ತಗೋತಾರೆ ಎಂದು ಕೇಳುವ ಸಂಚಯ ಪಾಟೀಲ್ ತಾವು ಎಷ್ಟು ಪೆಗ್ ತಗೋತಾರೆ ಎಂದು ಪ್ರಶ್ನಿಸಿದ ಅವರು, ಈ ರೀತಿ ಕೀಳಾಗಿ ಮಹಿಳೆಯರ ಬಗ್ಗೆ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಹರಪನಹಳ್ಳಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಭಾಗ್ಯಮ್ಮ, ಮಹಿಳಾ ಕಾರ್ಯಕರ್ತರಾದ ಸುಮಾ ಜಗದೀಶ, ಉಮಾ, ಕವಿತಾ ಸುರೇಶ, ಗುಂಡಗತ್ತಿ ನೇತ್ರಾವತಿ, ಶಕುಂತಲಾ, ರೇಣುಕಾಬಾಯಿ, ಹುಲಿಗೆಮ್ಮ, ಪುಷ್ಪಾ, ನಾಗರತ್ನಮ್ಮ, ನಾಗವೇಣಿ, ಗೌರಮ್ಮ ಪಾಲ್ಗೊಂಡಿದ್ದರು.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯ ಲಾಟಿ ದಾದಾಪೀರ, ಜಾಕೀರ ಹುಸೇನ್, ಮುಖಂಡರಾದ ಹುಲ್ಲಿಕಟ್ಟಿ ಚಂದ್ರಪ್ಪ, ಉದಯಶಂಕರ, ಮತ್ತೂರು ಬಸವರಾಜ, ಎಲ್.ಮಂಜನಾಯ್ಕ, ಎನ್.ಶಂಕರ, ಇತರ ಪುರುಷ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಸ್ಥಳದ ಎದುರಿಗೆ ನಿಂತು ಬಾಹ್ಯ ಬೆಂಬಲ ನೀಡಿ ಹುರಿದುಂಬಿಸುತ್ತಿದ್ದರು.