ರಾಮನಗರ: ಸಿಲಿಂಡರ್ ದರ ಹೆಚ್ಚಳ ಹಾಗೂ ಪೂರೈಕೆಯಲ್ಲಿನ ವ್ಯತ್ಯಯ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಾಗೂ ಅಭಾವವಾದರೂ ಕೇಂದ್ರ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೇ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕೋಕಿಲ ರಾಣಿ ಮಾತನಾಡಿ, ಗ್ಯಾಸ್ ಸಿಲಿಂಡರ್ ಬೆಲೆ ಏರಿಸುವ ಅವಶ್ಯಕತೆ ಏನಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಂತಹ ಭ್ರಷ್ಟ ಸರ್ಕಾರ ಮತ್ತೊಂದಿಲ್ಲ. ನಿರಂತರವಾಗಿ ಬಡ ಜನರ ಬದುಕಿನ ಮೇಲೆ ಬರೆ ಎಳೆಯುತ್ತಲಿದೆ. ಪ್ರಧಾನಿ ಮೋದಿ ಅಮೇರಿಕಾದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಡಿಮೆ ಮಾಡದಿದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜನಪರವಾಗಿರದೆ ಜನರ ವಿರೋಧಿಯಾಗಿದೆ. ರಷ್ಯಾದಿಂದ ಬ್ಯಾರೆಲ್ 45 ಮತ್ತು 60 ರೂ. ಪ್ಯೂಡ್‌ಆಯಿಲ್ ಖರೀದಿ ಮಾಡುತ್ತಿದ್ದ ಕೇಂದ್ರ ಸರ್ಕಾರವು ಎರಡು ಸಲವು ಬೆಲೆ ಕಡಿಮೆ ಮಾಡಲಿಲ್ಲ. ಇಂದು ಸ್ವಲ್ಪ ಜಾಸ್ತಿ ಆಗಿರುವುದನ್ನು ನೆಪಮಾಡಿಕೊಂಡು ಜನರ ಮೇಲೆ ಹೊರೆ ಹಾಕುವ ಕೆಲಸ ಸರಿಯಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ನಗರಸಭೆ ಸದಸ್ಯೆ ನಾಗಮ್ಮ, ಮುಖಂಡರಾದ ರೈಡ್ ನಾಗರಾಜು, ಸಿಎನ್‌ಆರ್ ವೆಂಕಟೇಶ್, ಕೃಷ್ಣಮೂರ್ತಿ, ಅಶೋಕ್ ಜೆಸಿಪಿ, ಪ್ರಮೋದ್, ಸುನೀಲ್, ಗುರುಪ್ರಸಾದ್, ರಾಜಮಹೇಂದರ್, ಶಕೀಲ್ ಅಹಮದ್, ಜಯಲಕ್ಷ್ಮಮ್ಮ, ಅಶ್ವತ್ಥ್, ಸಿದ್ದರಾಜು, ದೇವರಾಜು, ಸೈಯದ್ ಅರೀಫ್ ಉಲ್ಲಾ, ವಿನಯ್, ಎಂಸಿ.ಸ್ವಾಮಿ, ಶೋಭಾ, ಅರ್ಪಿತಾ, ಉಮಾ, ಅನಿತಾ, ಲೇಖಾನ, ಅಖಿಲಾಬಾನು, ಪದ್ಮಾವತಿ, ರಾಧಾ, ಸುಕನ್ಯಾ, ರಾಜೇಶ್ವರಿ, ಜಯಮ್ಮ, ಪ್ರಭಾವತಿ, ವಸಂತ ಮತ್ತಿತರರು ಭಾಗವಹಿಸಿದ್ದರು.
16ಕೆಆರ್ ಎಂಎನ್ 4.ಜೆಪಿಜಿರಾಮನಗರದ ಐಜೂರು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.