ಶಿವಮೊಗ್ಗ: ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಶುಕ್ರವಾರ ನಗರದ ಸರ್ಕಾರಿ ಬಾಲಕರ ಬಾಲ ಮಂದಿರ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ-ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಸೇರಿದಂತೆ ವಿವಿಧೆಡೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಾಸ್ಟೆಲ್‌ಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿದ್ದ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು.
ಶುಕ್ರವಾರ ಅವರು ನಗರದ ಸರ್ಕಾರಿ ಬಾಲಕರ ಬಾಲ ಮಂದಿರ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ-ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡಿದರು.ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ:ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು, ಅಡುಗೆ ಮನೆಗೆ ತೆರಳಿ, ಮೇಲ್ಛಾವಣಿ ಹಾಗೂ ಆಹಾರದ ಸುರಕ್ಷತೆ ಬಗ್ಗೆ ತಪಾಸಣೆ ಮಾಡಿದರು. ಕೈ ತೊಳೆಯುವ ಸ್ಥಳ, ವಾಟರ್ ಫಿಲ್ಟರ್ , ಮಕ್ಕಳು ಮಲಗುವ ಕೊಠಡಿಯನ್ನು ಪರಿವೀಕ್ಷಿಸಿ ಹಾಳಾಗಿರುವ ಹಾಸಿಗೆಗಳನ್ನು ಹಾಗೂ ಮಂಚಗಳನ್ನು ಬದಲಾಯಿಸಬೇಕೆಂದು ಸೂಚನೆ ನೀಡಿದರು.ಹಾಸಿಗೆ, ಮಂಚಗಳ ಗುಣಮಟ್ಟ ಪರೀಕ್ಷಿಸಿ ಖರೀದಿಸಬೇಕು. ಹಾಳಾದ ಮಂಚಗಳನ್ನು ದುರಸ್ತಿಪಡಿಸಿ ಹಾಗೂ ಹರಿದು ಹೋದ ಹಾಸಿಗೆಗಳನ್ನು ತೆಗೆದುಹಾಕಿ ಹೊಸದನ್ನು ಹಾಕಿಸುವಂತೆ ತಾಕೀತು ಮಾಡಿದರು.
ಕಿಟಕಿ ಗಾಜು, ಮೆಶ್ ಸರಿಪಡಿಸಬೇಕು. ಸ್ವಚ್ಛತೆ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಒಡೆದ ಗಾಜು ಮತ್ತು ಅಸಮರ್ಪಕ ಮೆಶ್‌ನಿಂದ ಸೊಳ್ಳೆಗಳು ಒಳಬಂದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ. ಇನ್ನು ಒಂದು ವಾರದೊಳಗೆ ಈ ಎಲ್ಲ ಕೆಲಸ ಆಗಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸ್ಟೆಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಬಾಲ ಮಂದಿರದ ಆವರಣದೊಳಗೆ ಹಂದಿಗಳ ಹಾವಳಿ ಇದ್ದು ಇದನ್ನು ತಪ್ಪಿಸಬೇಕು. ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.ಶೌಚಾಲಯ ವೀಕ್ಷಿಸಿದ ಅವರು, ಒಡೆದು ಹೋಗಿರುವ ಟೈಲ್ಸ್‌ಗಳನ್ನು ತೆಗೆದು ಹೊಸದಾಗಿ ಹಾಕಿಸಿ, ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕೆಂದ ಅವರು, ಅನುದಾನದ ಅವಶ್ಯಕತೆ ಇದ್ದರೆ ಕೇಳಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.ನಂತರ ಸರ್ಕಾರಿ ವಿಶೇಷ ದತ್ತು ಸಂಸ್ಥೆಗೆ ಭೇಟಿ ನೀಡಿ, ಶಿವರಾತ್ರಿ ಹಬ್ಬದಂದು ಕೇಂದ್ರಕ್ಕೆ ದಾಖಲಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದರು. ಇದೇ ವೇಳೆ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ, ನಿವಾಸಿಗಳೊಂದಿಗೆ ಮಾತನಾಡಿ, ಕುಂದುಕೊರತೆಗಳನ್ನು ಆಲಿಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ :ಸರ್ಕಾರಿ ಬಾಲಕಿಯರ ಬಾಲ ಮಂದಿರ, ಎಸ್‌ಸಿ/ಎಸ್‌ಟಿ ಬಾಲಕಿಯರ ಮೆಟ್ರಿಕ್ ಪೂರ್ವ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಊಟ, ತಿಂಡಿ ಇತರೆ ಸೌಲಭ್ಯಗಳು ಸರಿಯಾಗಿ ನೀಡುತ್ತಿದ್ದಾರಾ, ಕುಡಿಯುವ ನೀರಿನ ಸೌಲಭ್ಯ, ಬಿಸಿನೀರು, ಹೊಟ್ಟೆ ತುಂಬ ಗುಣಮಟ್ಟದ ಊಟ ಕೊಡುತ್ತಿದ್ದಾರಾ? ಎಂದು ಕೇಳಿದರು.ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ನಲ್ಲಿ ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್‌ಗಳು ಲಭ್ಯವಿದೆಯೇ, ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಾರಾ, ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲಾಗುತ್ತಿದೆಯೇ ಎಂದು ವಿಚಾರಿಸಿದರು.
ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಪುಸ್ತಕಗಳು, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕಂಪ್ಯೂಟರ್ ಒದಗಿಸುವಂತೆ ಸಂಬಧಿಸಿದ ಆಧಿಕಾರಿಗಳಿಗೆ ಸೂಚಿಸಿದ ಅವರು, ವಿದ್ಯಾರ್ಥಿನಿಲಯಗಳಲ್ಲಿ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ಗುಣಮಟ್ಟದೊಂದಿಗೆ ನೀಡಬೇಕು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಸೂಚಿಸಿದರು.ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಾದ ನ್ಯಾ.ಲೋಕಪ್ಪ.ಎನ್.ಆರ್, ನ್ಯಾ.ವಿಜಯಾನಂದ.ಜೆ.ವಿ, ನ್ಯಾ.ಕಿರಣ್.ಪಿ.ಎಂ ಪಾಟೀಲ್, ಜಿ.ಪಂ ಸಿಇಒ ಎನ್.ಹೇಮಂತ್, ಎಸ್‌ಪಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್, ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎಂ.ಎಸ್ ಮತ್ತಿತರರಿದ್ದರು.