ಕೆಲಸದ ಒತ್ತಡದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳಿ

KannadaprabhaNewsNetwork | Published : Jan 26, 2025 1:30 AM

ಸಾರಾಂಶ

ಆಯುಷ ಇಲಾಖೆ ವಕೀಲರಿಗೆ ಇಂತಹ ಆರೋಗ್ಯ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು ಉತ್ತಮ ಕಾರ್ಯವಾಗಿದೆ

ಗದಗ: ವಕೀಲರು ಸಮಾಜ ಸೇವೆಯಂತಹ ವೃತ್ತಿ ಜೀವನದಲ್ಲಿದ್ದು, ಕೆಲಸದ ಜತೆಗೆ ಎಲ್ಲರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.

ಅವರು ಶನಿವಾರ ಜಿಲ್ಲಾ ನ್ಯಾಯಾಲಯದಲ್ಲಿ ಆಯುಷ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ ಇಲಾಖೆ ರಾಷ್ಟ್ರೀಯ ಆಯುಷ ಅಭಿಯಾನ ಹಾಗೂ ರೂರಲ್ ಮೆಡಿಕಲ್ ಸೊಸೈಟಿ ಕೆ.ಎಚ್.ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಹುಲಕೋಟಿ, ಜಿಲ್ಲಾ ನ್ಯಾಯಾಂಗ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಉಚಿತ ಆಯುಷ ಆರೋಗ್ಯ ಚಿಕಿತ್ಸಾ ಶಿಬಿರ ಹಾಗೂ ಔಷಧಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಯುಷ ಇಲಾಖೆ ವಕೀಲರಿಗೆ ಇಂತಹ ಆರೋಗ್ಯ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು ಉತ್ತಮ ಕಾರ್ಯವಾಗಿದೆ. ಮಾನವರು ಯಾವುದೇ ರೀತಿಯ ಸಾಧನೆ ಮಾಡಬೇಕಾದರೆ ಆರೋಗ್ಯ ಅತ್ಯವಶ್ಯಕವಾಗಿದೆ. ಎಲ್ಲ ವಕೀಲರು ತಮ್ಮ ದಿನ ನಿತ್ಯದ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಗಮನಹರಿಸಿ ಉತ್ತಮ ಆರೋಗ್ಯ ಹೊಂದಬೇಕು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಜಯಪಾಲಸಿಂಗ್ ಮಾತನಾಡಿ, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಉಚಿತ ಆಯುಷ್ ಆರೋಗ್ಯ ಚಿಕಿತ್ಸಾ ಶಿಬಿರ ಹಾಗೂ ಔಷಧಿಗಳ ವಿತರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಅನೇಕ ಕಾಯಿಲೆ ಹೆಚ್ಚಾಗುತ್ತಿದ್ದು, ವಕೀಲರು ತಮ್ಮ ಕೆಲಸದ ಒತ್ತಡದ ಜತೆಗೆ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ ಮಾತನಾಡಿ, ಸದಾ ಕೆಲಸದೊತ್ತಡದಲ್ಲಿರುವ ವಕೀಲರು ಆರೋಗ್ಯ ಬಗ್ಗೆ ಕಾಳಜಿ ವಹಿಸದೆ ರೋಗಗಳಿಗೆ ದಾರಿ ಮಾಡಿಕೊಳ್ಳುತ್ತಾರೆ, ಉತ್ತಮ ಜೀವನ ಪದ್ಧತಿ ಹೊಂದಿ ಆರೋಗ್ಯವಾಗಿಬೇಕು ಹಾಗು ಶಿಬಿರದಲ್ಲಿ ಉಚಿತ ಔಷಧಿ ನೀಡಲಾಗುತಿದ್ದು ಅವುಗಳನ್ನು ಪಡೆದು ಶಿಬಿರದ ಸದುಪಯೋಗ ಪಡೆದುಕೋಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ. ಹದ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಸಿ.ಎಸ್. ಶಿವನಗೌಡ್ರ ಸೇರಿದಂತೆ ಗಣ್ಯರು ಹಾಜರಿದ್ದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ ಸ್ವಾಗತಿಸಿದರು. ಜಿಲ್ಲಾ ಆಯುಷ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಸಂಜೀವ ನಾರಪ್ಪನವರ ವಂದಿಸಿದರು. ಜಿಲ್ಲಾ ವಕೀಲ ಸಂಘದ ಜಂಟಿ ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ ನಿರೂಪಿಸಿದರು.

Share this article