ಮಂಜುನಾಥ ಕೆ.ಎಂ.
700 ಜನರಿಗೆ ಒಬ್ಬ ಕಾರ್ಮಿಕ!
ನಿಯಮದ ಪ್ರಕಾರ 700 ಜನರಿಗೆ ಒಬ್ಬ ಪೌರ ಕಾರ್ಮಿಕ ಇರಬೇಕೆಂಬ ಮಾನದಂಡವಿದೆ. ಬಳ್ಳಾರಿ ಮಹಾನಗರದ ಜನಸಂಖ್ಯೆ ಸುಮಾರು 6 ಲಕ್ಷ ತಲುಪಿರುವ ಹಿನ್ನೆಲೆಯಲ್ಲಿ 850ಕ್ಕೂ ಅಧಿಕ ಪೌರ ಕಾರ್ಮಿಕರ ಅಗತ್ಯವಿದೆ. ಆದರೆ, ಸದ್ಯ ಮಹಾನಗರದಲ್ಲಿ 594 ಕಾಯಂ ಹೆಚ್ಚುವರಿಯಾಗಿ 159 ಮಂದಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಇರುವ ಪೌರ ಕಾರ್ಮಿಕರ ಮೇಲೆಯೇ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಅವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.ಹೊಸ ಬಡಾವಣೆಗಳು, ವಸತಿ ಪ್ರದೇಶಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ರಸ್ತೆ ಜಾಲ ವಿಸ್ತರಣೆಯಾಗುತ್ತಿದ್ದು, ಹಾಲಿ ಸಿಬ್ಬಂದಿಯಿಂದ ಸಂಪೂರ್ಣ ನಗರವನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ.
ನಗರದಲ್ಲಿ ಸುಮಾರು 1.30 ಲಕ್ಷ ಮನೆಗಳಿವೆ. ಇದಲ್ಲದೆ 10 ಸಾವಿರಕ್ಕೂ ಅಧಿಕ ಅಂಗಡಿ, ಹೋಟೆಲ್‌ಗಳು ಹಾಗೂ ಇತರೆ ವಾಣಿಜ್ಯ ಕಟ್ಟಡಗಳಿವೆ. ಇಂತಹ ಬೃಹತ್ ಪ್ರಮಾಣದ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಿಂದ ಪ್ರತಿದಿನ ಸುಮಾರು 200 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಮನೆಗಳಿಂದ ಸಂಗ್ರಹವಾಗುವ ಹಸಿ ಮತ್ತು ಒಣ ತ್ಯಾಜ್ಯ, ಹೋಟೆಲ್‌ಗಳಿಂದ ಹೊರಬರುವ ತ್ಯಾಜ್ಯ, ಮಾರುಕಟ್ಟೆ ಪ್ರದೇಶಗಳ ಕಸ ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿತ್ಯ ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗಿದೆ. ಆದರೆ, ತ್ಯಾಜ್ಯ ಸಂಗ್ರಹಿಸುವ ವಾಹನಗಳ ಸಂಖ್ಯೆಯಲ್ಲೂ ಅಗತ್ಯ ಮತ್ತು ಲಭ್ಯತೆಯ ನಡುವೆ ಭಾರಿ ಅಂತರವಿದೆ.
ನಿತ್ಯ ತ್ಯಾಜ್ಯ ಸಂಗ್ರಹಿಸಲು ಸುಮಾರು 200 ವಾಹನಗಳ ಅಗತ್ಯವಿದೆ. ಆದರೆ, ಪಾಲಿಕೆಯ ಬಳಿಯಿರುವುದು 120 ವಾಹನಗಳು ಮಾತ್ರ. ಅಗತ್ಯಕ್ಕೆ ಹೋಲಿಸಿದರೆ ಸುಮಾರು 80 ವಾಹನಗಳ ಕೊರತೆ ಇದ್ದು, ಎಲ್ಲ ವಾರ್ಡ್‌ಗಳಲ್ಲಿ ನಿಯಮಿತವಾಗಿ ತ್ಯಾಜ್ಯ ಸಂಗ್ರಹಿಸುವುದು ಕಷ್ಟವಾಗುತ್ತಿದೆ. ವಾಹನಗಳು ಸಮಯಕ್ಕೆ ಸರಿಯಾಗಿ ಬರದಿರುವುದರಿಂದ ಮನೆಗಳ ಮುಂದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನರು ತ್ಯಾಜ್ಯ ಬಿಸಾಡುವ ದೃಶ್ಯಗಳು ಕಂಡು ಬರುತ್ತವೆ.
ಸ್ವಚ್ಛತೆ ಎನ್ನುವುದು ಕೇವಲ ನಗರ ಸೌಂದರ್ಯದ ಪ್ರಶ್ನೆಯಲ್ಲ. ಸಾರ್ವಜನಿಕ ಆರೋಗ್ಯಕ್ಕೂ ನೇರವಾಗಿ ಸಂಬಂಧಿಸಿದೆ. ತ್ಯಾಜ್ಯ ನಿಗದಿತ ಸಮಯಕ್ಕೆ ಸಂಗ್ರಹವಾಗದೆ ಉಳಿದರೆ ದುರ್ವಾಸನೆ, ಸೊಳ್ಳೆ, ನೊಣಗಳ ಹಾವಳಿ ಸೇರಿ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಹೀಗಾಗಿ, ನಿಗದಿತವಾಗಿ ಸಂಗ್ರಹಣ, ಡಂಪಿಂಗ್ ಯಾರ್ಡ್‌ಗೆ ಸಾಗಿಸಲು ವಾಹನಗಳ ಸಂಖ್ಯೆ ಹೆಚ್ಚಿಸಬೇಕಿದೆ.‘ಸ್ವಚ್ಛ ಬಳ್ಳಾರಿ’ಯ ಗುರಿ ಸಾಕಾರವಾಗಬೇಕಾದರೆ ಮೊದಲು ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ, ವಾಹನ ಹಾಗೂ ತ್ಯಾಜ್ಯ ಸಾಗಣೆ ವ್ಯವಸ್ಥೆ ಕಲ್ಪಿಸುವುದು ಸಹ ಅಷ್ಟೇ ಮುಖ್ಯ.