ಬೆಳಕಿನ ಕೊರತೆಯಿಂದ ಪರದಾಡುತ್ತಿದ್ದಾರೆ ಸಾರ್ವಜನಿಕರು
ಕನ್ನಡಪ್ರಭ ವಾರ್ತೆ ಗದಗ
ಗದಗ ಬೆಟಗೇರಿ ಅವಳಿ ನಗರದಲ್ಲಿ ಹಲವಾರು ತಿಂಗಳುಗಳಿಂದ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ರಾತ್ರಿ ವೇಳೆ ಕತ್ತಲಲ್ಲಿಯೇ ಸಂಚರಿಸುವಂತಾಗಿದೆ. ಅದರಲ್ಲಿಯೂ ಪ್ರಮುಖ ಬೀದಿಗಳಲ್ಲಿಯೇ ಬೀದಿದೀಪಗಳು ಉರಿಯುತ್ತಿಲ್ಲ, ಉರಿದರೂ ಬೆರಣಿಕೆಯಷ್ಟು ಮಾತ್ರ ಬೆಳಕು ನೀಡುತ್ತಿದ್ದು, ಇನ್ನುಳಿದವರು ಹೆಸರಿಗೆ ಮಾತ್ರ ದೀಪಗಳಾಗಿ ಉಳಿದಿವೆ.ಎಲ್ಲೆಲ್ಲಿ ಸಮಸ್ಯೆ?: ಗದಗ ಮತ್ತು ಬೆಟಗೇರಿ ನಗರದ ವ್ಯಾಪ್ತಿಯ ಬಹುತೇಕ ವಾರ್ಡ್‌ಗಳಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಗಂಗಿಮಡಿ, ಬೆಟಗೇರಿಯ ಭಜಂತ್ರಿ ನಗರ, ವಾಲ್ಮೀಕಿ ನಗರ, ನರಸಾಪುರ ಆಶ್ರಯ ಕಾಲನಿ, ಹನುಮಾನಸಿಂಗ್ ಜಮಾದಾರ ನಗರ, ಬೆಟಗೇರಿಯ ಸಿದ್ದಲಿಂಗೇಶ್ವರ ನಗರ, ಶರಣ ಬಸವೇಶ್ವರ ನಗರ, ಸಂಭಾಪುರ ರಸ್ತೆ, ಸಿಕ್ಕಲಗಾರ ಕಾಲನಿ ಸೇರಿದಂತೆ ನಗರದಲ್ಲಿ ಹಲವೆಡೆ ಬೀದಿದೀಪಗಳನ್ನು ಹಲವಾರು ತಿಂಗಳುಗಳಿಂದ ಬದಲಾಯಿಸಿಲ್ಲ.
ನಿರ್ವಹಣೆಗೆ ₹11.42 ಲಕ್ಷ: ಅವಳಿ ನಗರದ ಬೀದಿದೀಪಗಳ ನಿರ್ವಹಣೆಗಾಗಿ ನಗರಸಭೆಯ ಆಡಳಿತ ಮಂಡಳಿ ಪ್ರತಿ ತಿಂಗಳು ₹11.42 ಲಕ್ಷ ಬಿಲ್ ಪಾವತಿಸುವ ಕಾರ್ಯಾದೇಶವನ್ನು 2023ರ ಡಿಸೆಂಬರ್ 1ರಂದು ಹೊರಡಿಸಲಾಗಿದೆ. ಆದರೆ ಅಧಿಕೃತ ಆದೇಶವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಭೌತಿಕ ಕಾಮಗಾರಿಯಲ್ಲಿ ಮಾತ್ರ ಯಾವುದೇ ಪ್ರಗತಿ ಆಗಿಲ್ಲ ಎನ್ನುವುದು ರಾತ್ರಿ ವೇಳೆಯಲ್ಲಿ ಅವಳಿ ನಗರದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಗೋಚರವಾಗುವ ಸತ್ಯವಾಗಿದೆ. ಹಲವು ಅನುಮಾನಗಳು
ಹಣ ಪಾವತಿಯಾಗುತ್ತಿದೆ:
ಬೀದಿ ದೀಪಗಳ ನಿರ್ವಹಣೆ ಎನ್ನುವುದು ನಗರಸಭೆಯ ಕೆಲ ಸದಸ್ಯರು, ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಪ್ರತಿ ತಿಂಗಳು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. 2022-23 ವಾರ್ಷಿಕ ಅವಧಿಯಲ್ಲಿ ಗುತ್ತಿಗೆಯ ಮೂಲ ಬೆಲೆ ₹99.89 ಲಕ್ಷಕ್ಕೆ ಗದಗ ನಗರದ ಸಂಸ್ಥೆಯೊಂದಕ್ಕೆ ಬೀದಿ ದೀಪಗಳ ಕಾರ್ಯ ನಿರ್ವಹಣೆಗೆ ಗುತ್ತಿಗೆ ನೀಡಲಾಗಿತ್ತು. ಆಗಿನಿಂದಲೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ. ಪ್ರಸಕ್ತ ಸಾಲಿನಲ್ಲಿಯೂ ಗದಗ ನಗರದ ಮತ್ತೊಂದು ಸಂಸ್ಥೆಗೆ ವಾರ್ಷಿಕ ₹1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪಗಳ ನಿರ್ವಹಣೆ ನೀಡಲಾಗಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯಾಗಲಿ ಅಥವಾ ಹಿರಿಯ ಅಧಿಕಾರಿಗಳಾಗಲಿ ಸಮರ್ಪಕವಾದ ರೀತಿಯಲ್ಲಿ ತನಿಖೆ ನಡೆಸಿದಲ್ಲಿ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳ ಬಣ್ಣ ಬಯಲಾಗುತ್ತದೆ ಎಂಬ ಆಗ್ರಹ ಕೇಳಿ ಬರುತ್ತಿದೆ.