ಕನ್ನಡಪ್ರಭ ವಾರ್ತೆ ಹನೂರು
ಕಾಡಾನೆ ದಾಳಿಗೆ ಜೋಳದ ಫಸಲಿನ ಜೊತೆಗೆ ಕಲ್ಲು ಕಂಬಗಳು ಒಡೆದಿರುವ ಘಟನೆ ಶುಕ್ರವಾರ ರಾತ್ರಿ ಅಜ್ಜೀಪುರ ಗ್ರಾಮದ ಹೊರವಲಯದಲ್ಲಿ ಜರುಗಿದೆ. ತಾಲೂಕಿನ ಅಜ್ಜೀಪುರ ಗ್ರಾಮದ ಸುರೇಶ್ ಅವರ ಜಮೀನಿಗೆ ಕಾಡಾನೆ ನುಗ್ಗಿ ಅಪಾರ ಪ್ರಮಾಣದ ಫಸಲು ನಾಶ ಮಾಡಿದೆ. ರೈತ ಸುರೇಶ್ ಮಾತನಾಡಿ, ತಮ್ಮ ಜೀವನ ನಿರ್ವಹಣೆಗೆ ಗುತ್ತಿಗೆ ಪಡೆದ ಜಮೀನಿನಲ್ಲಿ ಜೋಳದ ಫಸಲು ಬೆಳೆದಿದ್ದು ಕಾಳು ಕಟ್ಟುವ ಸಂದರ್ಭದಲ್ಲಿ ತಡರಾತ್ರಿ ಕಾಡಾನೆ ದಾಳಿ ಮಾಡಿದ್ದು, ಸುಮಾರು 10 ಕ್ವಿಂಟಲ್ ಗೂ ಹೆಚ್ಚು ಜೋಳದ ಫಸಲು ನಷ್ಟವಾಗಿದೆ. ಬರಗಾಲದ ನಡುವೆಯೂ ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಜಮೀನಿನ ಸುತ್ತಲೂ ಕಲ್ಲು ಕಂಬ ಹಾಗೂ ಮೆಸ್ ಹಾಕಿದ್ದು ಎರಡು ಕಡೆ ಕಲ್ಲು ಕಂಬಗಳು ಹಾಗೂ ಮೆಸ್ ಸಹ ಸಂಪೂರ್ಣ ತುಳಿದಿದ್ದು ಇದರಿಂದ ರೈತನಿಗೆ ಸಂಪೂರ್ಣ ನಷ್ಟವುಂಟಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಜೊತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸುರೇಶ್ ಆಗ್ರಹಿಸಿದ್ದಾರೆ.
ರೈಲು ಕಂಬಿ ದುರಸ್ತಿಗೆ ಆಗ್ರಹ: ಅಜ್ಜೀಪುರ ಹೊರವಲಯದಲ್ಲಿ ಆನೆ ಕಂದಕ ಮಾಡಿದ್ದು, ಮಧ್ಯ ಭಾಗದಲ್ಲಿರುವ ರಸ್ತೆಗೆ ಅಡ್ಡಲಾಗಿ ರೈಲ್ವೆ ಕಂಬಿಯನ್ನು ಅಳವಡಿಸಲಾಗಿದೆ. ಒಂದು ಭಾಗವನ್ನು ಆನೆ ಮುರಿದು ತಿಂಗಳು ಕಳೆದಿದ್ದರೂ ಇತ್ತ ಯಾರೂ ಗಮನಹರಿಸಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.ಕಾಡಾನೆ ದಾಳಿಯಿಂದ ಆಗಿರುವ ನಷ್ಟಕ್ಕೆ ಅರ್ಜಿ ಪಡೆದುಕೊಂಡು ಪರಿಹಾರ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ರೈಲ್ವೆ ಕಂಬಿ ಮುರಿದಿರುವುದು ನನ್ನ ಗಮನಕ್ಕೆ ಇದೀಗ ಬಂದಿದ್ದು ಅದನ್ನು ಸಹ ದುರಸ್ತಿಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ.-ಪ್ರವೀಣ್, ಆರ್‌ಎಫ್ ಒ, ಹನೂರು ಬಫರ್ ವಲಯ.