ಸಿದ್ದಯ್ಯ ಹಿರೇಮಠ
ಕನ್ನಡಪ್ರಭ ವಾರ್ತೆ ಕಾಗವಾಡಇಷ್ಟು ದಿನ ಕಬ್ಬಿನ ಬೆಲೆ ಏರಿಕೆ ಸಂಬಂಧ ರೈತರು ಹೋರಾಟ ಮಾಡಿದ್ದಾಯ್ತು, ಇದೀಗ ಮೆಕ್ಕೆಜೋಳದ ರಾಶಿ ಆರಂಭವಾಗುತ್ತಿದ್ದಂತೆ ಬೆಲೆಯಲ್ಲಿ ಕುಸಿತ ಕಂಡಿದೆ. ಇದರಿಂದ ರೈತರು ತೀವ್ರ ಕಂಗಾಲಾಗಿದ್ದಾರೆ. ಅಥಣಿ ಹಾಗೂ ಕಾಗವಾಡ ತಾಲೂಕಿನಾದ್ಯಂತ ಈ ಬಾರಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳವನ್ನೇ ಬೆಳೆದಿದ್ದಾರೆ. ಅಲ್ಲದೇ, ಇದೀಗ ರಾಶಿ ಕೂಡ ಆರಂಭವಾಗಿದ್ದು, ಮೆಕ್ಕೆಜೋಳ ಬೆಲೆ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ.
ಮಾರುಕಟ್ಟೆಗೆ ಮೆಕ್ಕೆಜೋಳ ವ್ಯಾಪಕವಾಗಿ ಹರಿದು ಬಂದಿದ್ದರಿಂದ ಒಂದು ವಾರದ ಅವಧಿಯಲ್ಲಿ ಕ್ವಿಂಟಾಲ್‌ಗೆ ₹ 2400 ರಿಂದ ₹ 2500 ಇದ್ದ ಬೆಲೆ ದಿಢೀರ್‌ನೇ ₹ 1700 ರಿಂದ 1800ಕ್ಕೆ ಇಳಿಕೆಯಾಗಿದೆ. ಮೆಕ್ಕೆಜೋಳ ಆವಕ ಹೆಚ್ಚಾದಂತೆಲ್ಲ ಇನ್ನೂ ಬೆಲೆ ಕುಸಿಯುವ ಲಕ್ಷಣಗಳು ಕಂಡು ಬಂದಿರುವದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಗಳು ವಿಫುಲ ಪ್ರಮಾಣದಲ್ಲಿ ಆಗಿರುವದರಿಂದ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಉತ್ತಮ ಇಳುವರಿ ಬಂದಿವೆ. ಸತತ ಬರಗಾಲ ಅನುಭವಿಸಿ ಕಂಗೆಟ್ಟಿದ್ದ ಅನ್ನದಾತ ಈ ವರ್ಷ ಅವಧಿಗೆ ಮುನ್ನವೆ ಮುಂಗಾರು ಮಳೆ ಕೈ ಹಿಡಿದಿದ್ದರಿಂದ ಈ ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಗೋವಿನ ಜೋಳೆ ಬೆಳೆದಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ದರ ಕುಸಿತ ನಿರಾಸೆ ಮಾಡಿದೆ.ಜೂನ್, ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೃಷಿ ಇಲಾಖೆಯ ಪ್ರಕಾರ ತಾಲೂಕಿನಲ್ಲಿ ಖುಷ್ಕಿ ಹಾಗೂ ನೀರಾವರಿ ಸೇರಿ 80 ಸಾವಿರ ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಎಕರೆಗೆ 15 ರಿಂದ 18 ಕ್ವಿಂಟಾಲ್ ಮೆಕ್ಕೆಜೋಳ ಇಳುವರಿ ಬಂದಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ಇಳುವರಿ ಕುಂಟಿತಗೊಂಡಿದ್ದು, ರೈತರಿಗೆ ಸಂಕಷ್ಟ ತಂದಿಟ್ಟಿದೆ. ಪ್ರತಿ ಬಾರಿಯೂ ಸರ್ಕಾರ ತಡವಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದರಿಂದ ಬೆಂಬಲ ಬೆಲೆ ಯೋಜನೆಯ ಲಾಭ ರೈತರಿಗೆ ದೊರೆಯದಂತಾಗಿದ್ದು, ವ್ಯಾಪಾರಿಗಳಿಗೆ ಮಾತ್ರ ಅನುಕೂಲವಾಗುತ್ತಿದೆ ಎಂದು ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸರ್ಕಾರ ಈಗ ಖರೀದಿ ಕೇಂದ್ರಗಳನ್ನು ತೆರೆದು ಪ್ರತಿ ಕೆಜಿಗೆ ₹ 18 ನಂತೆ ನಿಗದಿ ಮಾಡಿದರೂ, ದಲ್ಲಾಳಿಗಳು ಮಧ್ಯೆ ಪ್ರವೇಶಿಸಿ ದರದಲ್ಲಿ ಅಸ್ಥಿರತೆ ಉಂಟು ಮಾಡಿರುವದರಿಂದ ರೈತರಿಗೆ ಮತ್ತಷ್ಟು ನಷ್ಟವಾಗುತ್ತಿದೆ. ಬೀಜ, ರಸಗೊಬ್ಬರ ತಂದಿದ್ದು, ಅಂಗಡಿಕಾರರಿಗೆ ಹಣ ನೀಡಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಬೆಂಬಲ ಬೆಲೆ ಘೋಷಿಸುವವರೆಗೆ ಕಾಯುವಷ್ಟು ತಾಳ್ಮೆ ರೈತರಲ್ಲಿ ಇಲ್ಲ. ವ್ಯಾಪಾರಿ ನಿಗದಿ ಮಾಡುವ ದರಕ್ಕೆ ಮಾರುಟ ಮಾಡುವ ಸ್ಥಿತಿ ಉಂಟಾಗಿದ್ದು, ರೈತರು ಇಲ್ಲಿಯೂ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ.
ತಾಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋವಿನಜೋಳ ಉತ್ಪಾದನೆ ಆಗಿದ್ದು, ಸೂಕ್ತ ಗೋದಾಮು ವ್ಯವಸ್ಥೆ ತೆರೆದು ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ರೈತರು ಆಗ್ರಹಿಸುತ್ತಿದ್ದಾರೆ.---ಕೋಟ್---
ಈ ವರ್ಷ ಮಳೆ, ಬೆಳೆ ಉತ್ತಮವಾಗಿವೆ. ಆದರೆ, ಬೆಳೆಗೆ ತಕ್ಕಂತೆ ದರ ಸಿಗುತ್ತಿಲ್ಲ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಒಂದ ಚೀಲ ಗೊಬ್ಬರಕ್ಕ ₹ 1800 ದಿಂದ ₹ 2000 ಬೆಲೆ ಇದೆ. ಆದರೆ, ಒಂದ ಕ್ವಿಂಟಾಲ್ ಗೋವಿನ ಜೋಳಕ ₹ 1800 ಧಾರಣಿ ಆದ್ರೆ ಯಾವ ರೈತ ಬದುಕಲು ಸಾಧ್ಯ..? ಕಳೇದ ಬಾರಿ ಮಳೆ ಇಲ್ಲದೇ ನಷ್ಟವಾಗಿತ್ತು. ಆದ್ರ ಈ ಸಲ ಬಂಪರ್ ಬೆಳೆ ಬಂದರೂ ಮಾಡಿದ ಖರ್ಚು ಸರಿದೂಗಿಸುವಂತಾಗಿದೆ.ಸಿದ್ದು ಹವಳೆ, ಪ್ರಗತಿಪರ ರೈತ ಮೋಳೆ
---ಕೋಟ್ ---
ನೆರೆ, ಬರದ ನಡುವೆ ಈ ವರ್ಷ ದರ ಕುಸಿತವೂ ಸೇರಿ ರೈತರಿಗೆ ಸರಕಾರ ಮತ್ತು ದಲ್ಲಾಳಿಗಳೂ ಕೂಡಿಕೊಂಡು ಗಾಯದ ಮೇಲೆ ಬರೆ ಎಳೆದಿವೆ. ಒಂದೆಡೆ ಕಬ್ಬಿಗೆ ವೈಜ್ಞಾನಿಕ ಬೆಲೆ ಇಲ್ಲ, ಇನ್ನೊಂದೆಡೆ ಗೋವಿನ ಜೋಳಕ್ಕೆ ದರ ಇಲ್ಲ. ಇದರಿಂದಾಗಿ ಪ್ರತಿವರ್ಷ ರೈತರು ಆರ್ಥಿಕ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇತ್ತ ಗಮನ ಹರಿಸಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ ಪಡಿಸಬೇಕು.ಶೀತಲಗೌಡ ಪಾಟೀಲ, ಪ್ರಗತಿಪರ ರೈತ, ಉಗಾರ ಬಿ.ಕೆ