ರಿಯಾಜಅಹ್ಮದ ದೊಡ್ಡಮನಿ
ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹2400 ಘೋಷಣೆ ಮಾಡಿದೆ. ಇಷ್ಟು ದರ ಮಾರುಕಟ್ಟೆಯಲ್ಲಿ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ.
ಗದಗ, ಮುಂಡರಗಿ, ಶಿರಹಟ್ಟಿ, ನರಗುಂದ ಮಾರುಕಟ್ಟೆಯಲ್ಲಿ ಲಕ್ಷಾಂತರ ಕ್ವಿಂಟಲ್‌ಗೂ ಅಧಿಕ ಮೆಕ್ಕೆಜೋಳ ಆವಕವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಮೆಕ್ಕೆಜೋಳ ₹2400 ಇದ್ದ ಬೆಲೆ ದಿಢೀರನೆ ₹1700ಕ್ಕೆ ಕುಸಿದಿದೆ. ಇಷ್ಟು ಕಡಿಮೆ ದರಕ್ಕೆ ಮಾರಿದರೆ ಮಾಡಿದ ಖರ್ಚು ಸಹ ಬರದಂತಾಗಿ, ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.ಮಾರಾಟಕ್ಕೆ ಹರಸಾಹಸ: ಇನ್ನು ಕೆಲವು ರೈತರು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ರೈತರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ದಲ್ಲಾಳಿ ಅಂಗಡಿಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ಸರದಿಯಲ್ಲಿ ಹಗಲು-ರಾತ್ರಿ ನಿಲ್ಲಬೇಕು. ಮೆಕ್ಕೆಜೋಳ ಹೊತ್ತು ತಂದ ಟ್ರ್ಯಾಕ್ಟರ್‌ನಲ್ಲಿಯೇ ಮಲಗಿ ಉತ್ಪನ್ನವನ್ನು ಕಾಯಬೇಕು. ಅಂತಹ ದುಸ್ಥಿತಿ ರೈತರದ್ದಾಗಿದೆ. ಇದಕ್ಕಾಗಿ ರೈತರು ಟ್ರ್ಯಾಕ್ಟರ್ ಬಾಡಿಗೆ ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ. ರೈತರ ಸ್ಥಿತಿ ಹೇಳತೀರದಾಗಿದೆ.
ಖರೀದಿ ಕೇಂದ್ರ: ಸರ್ಕಾರದಿಂದ ಸೂರ್ಯಕಾಂತಿ, ಶೇಗಾ ಬೆಂಬಲ ಬೆಲೆಯಡಿ ಖರೀದಿಗೆ ಆದೇಶವಾಗಿದೆ. ಅದೇ ರೀತಿ ಗೋವಿನಜೋಳ ಖರೀದಿಸಲು ಸರ್ಕಾರದ ಆದೇಶ ಬಂದ ತಕ್ಷಣ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಮುಂಡರಗಿ ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಜೆ. ತಿಳಿಸಿದರು.