ಮೆಕ್ಕೆಜೋಳ ಖರೀದಿ ಘೋಷಣೆ, ಪ್ರತಿಭಟನೆ ಹತ್ತಿಕ್ಕುವ ಷಡ್ಯಂತ್ರ

KannadaprabhaNewsNetwork |  
Published : Nov 23, 2025, 02:45 AM IST
ಬ್ಯಾಡಗಿಯಲ್ಲಿ ಪ್ರಚಾರ ವಾಹನಕ್ಕೆ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಬೆಂಬಲ ಬೆಲೆ ದರದಲ್ಲಿ 10 ಲಕ್ಷ ಟನ್ ಗೋವಿನ ಜೋಳ ಖರೀದಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಇದು ಕೇವಲ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾದ್ಯಂತ ನ. 24ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಹತ್ತಿಕ್ಕುವ ಷಡ್ಯಂತ್ರದ ಮುಂದುವರಿದ ಭಾಗವಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.

ಬ್ಯಾಡಗಿ: ಬೆಂಬಲ ಬೆಲೆ ದರದಲ್ಲಿ 10 ಲಕ್ಷ ಟನ್ ಗೋವಿನ ಜೋಳ ಖರೀದಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಇದು ಕೇವಲ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾದ್ಯಂತ ನ. 24ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಹತ್ತಿಕ್ಕುವ ಷಡ್ಯಂತ್ರದ ಮುಂದುವರಿದ ಭಾಗವಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.

ನ. 24ರಂದು ಹಾವೇರಿಯಲ್ಲಿ ನಡೆಯಲಿರುವ ರೈತ ಸಂಘದ ಬೃಹತ್ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಚರಿಸಲಿರುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಹಾಗೂ ಸಚಿವ ಎಚ್.ಕೆ. ಪಾಟೀಲ ಅವರು ರೈತರಿಗೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು. ಕೇವಲ ಹಾವೇರಿ ಜಿಲ್ಲೆಯೊಂದರಲ್ಲೇ 12 ಲಕ್ಷ ಟನ್ ಅಧಿಕ ಗೋವಿನ ಜೋಳ ಬೆಳೆದಿದ್ದೇವೆ. ಕನಿಷ್ಠ ಇಂತಹ ಜ್ಞಾನವನ್ನು ಕೂಡ ಹೊಂದಿರದ ಇಬ್ಬರಿಂದ ರಾಜ್ಯ ರೈತರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ತಳಬುಡವಿಲ್ಲದ ಹೇಳಿಕೆಗಳಿಂದ ರೈತರನ್ನು ದಾರಿ ತಪ್ಪಿಸುವ ಕೆಲಸ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳಿಂದ ಆಗುತ್ತಿದೆ ಎಂದು ಹೇಳಿದರು.

ಸಹಾಯಧನದ ಬಗ್ಗೆ ಚರ್ಚೆಯಾಗಿಲ್ಲ: ಚಿಕ್ಕಪ್ಪ ಛತ್ರದ ಮಾತನಾಡಿ, ಬೆಂಬಲ ಬೆಲೆ ₹2400ಗಳಿಗೆ ₹600 ಸಹಾಯಧನ ಸೇರಿಸಿ ಪ್ರತಿ ಕ್ವಿಂಟಲ್‌ಗೆ ನೀಡುವಂತೆ ರೈತ ಸಂಘ ಆಗ್ರಹಿಸಿತ್ತು. ಆದರೆ ಸಹಾಯಧನ ₹600 ಕುರಿತು ಚಕಾರವೆತ್ತದ ಸರ್ಕಾರ ತರಾತುರಿಯಲ್ಲಿಯೇ ರಾಜ್ಯಾದ್ಯಂತ ಒಟ್ಟು 10 ಲಕ್ಷ ಟನ್ ಗೋವಿನಜೋಳ ಖರೀದಿಗೆ ಮುಂದಾಗಿರುವುದಾಗಿ ಹೇಳಿಕೆ ನೀಡಿದೆ ಎಂದರು.

ಮಾರ್ಗಸೂಚಿಗಳಿಲ್ಲ: ಗಂಗಣ್ಣ ಎಲಿ ಮಾತನಾಡಿ, ಗೋವಿನ ಜೋಳ ಖರೀದಿಗೆ ಸರ್ಕಾರ ಮುಂದಾಗಿದ್ದು, ಅದಕ್ಕೆ ಯಾವುದೇ ಮಾರ್ಗಸೂಚಿಗಳಿಲ್ಲ. ಹೀಗಾಗಿ ಇದೊಂದು ಬೋಗಸ್ ಹೇಳಿಕೆಯಾಗಿದೆ. ರೈತರ ಒಗ್ಗಟ್ಟು ಕೆಡಿಸುವ ತಂತ್ರವಾಗಿದೆ. ಆದರೆ ಯಾವುದೇ ಕಾರಣಕ್ಕೂ ನ. 24ರಂದು ಹಮ್ಮಿಕೊಂಡಿರುವ ಮುಷ್ಕರ ಹಿಂದಕ್ಕೆ ಪಡೆಯುವ ಪ್ರಶ್ನೆಯಿಲ್ಲ. ಕಾರಣ ರೈತರು ಹಾವೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಕೀಲ ಮೃತ್ಯುಂಜಯ ಲಕ್ಕಣ್ಣನವರ, ಜಾನ್ ಪುನೀತ್ ಇನ್ನಿತರರಿದ್ದರು.

ನ. 24ರಂದು ನಡೆಯುವ ಬಲ ಪ್ರದರ್ಶನ ಒಂದರ್ಥದಲ್ಲಿ ಸರ್ಕಾರದ ವಿರುದ್ಧ ರೈತರಿಂದ ಒಂದು ಸ್ಪಷ್ಟ ಸಂದೇಶವನ್ನು ನೀಡಬೇಕಾಗಿದೆ. ಗೋವಿನ ಜೋಳ ಸೇರಿದಂತೆ ಕಬ್ಬು ಬೆಳೆಗಾರ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರೈತಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ