ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರಣ್ಯಪುರಂನ ಜಿಲ್ಲಾ ವೀರ ಮಡಿವಾಳ ಸಂಘದ ವತಿಯಿಂದ ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಜರುಗಿದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ, ಮನ ಮನೆಗೆ ಮಾಚಿದೇವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಕಾಯಕ ಸಮಾಜಗಳ ಮಹತ್ವವನ್ನು ತಿಳಿಸಿದ್ದರು. ಕಾಯಕ ಸಮಾಜಗಳ ಕಾಯಕದ ಶ್ರಮದ ಫಲವೇ ವಚನ ಸಾಹಿತ್ಯವಾಗಿ ಹೊರಹೊಮ್ಮಿತ್ತು. ಮಡಿವಾಳ ಮಾಚಿದೇವರು ಅತ್ಯಂತ ನಂಬಿಕಸ್ಥರಾಗಿದ್ದರು. ಮಡಿವಾಳ ಸಮುದಾಯ ಕಾಯಕ ನಿಷ್ಠೆ ಮತ್ತು ಶ್ರಮಜೀವನಕ್ಕೆ ಹೆಸರಾಗಿತ್ತು ಎಂದರು.ಹಿಂದುಳಿದ ಸಮಾಜಗಳು, ಕಾಯಕ ಸಮಾಜಗಳು ಸಂಘಟನೆಯ ಕೊರತೆಯಿಂದ ಸಮುದಾಯದ ಜಾಗೃತಿ ಮೂಡಿಸುವಲ್ಲಿ ಹಿಂದೆ ಬಿದ್ದಿವೆ. ಜಾತಿಗಣತಿ ವೇಳೆ ಸಮುದಾಯದ ಪರವಾಗಿ ಯಾರು ಬೀದಿಗೆ ಇಳಿಯಲಿಲ್ಲ. ಸಿದ್ದರಾಮಯ್ಯ ಅವರು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಕೊಟ್ಟಿದ್ದರಿಂದ ಚುನಾವಣೆಗೆ ಸಣ್ಣ ಸಣ್ಣ ಸಮುದಾಯಗಳು ಸ್ಪರ್ಧಿಸಲು ಅವಕಾಶಗಳು ಸಿಕ್ಕಿದವು. ಗಾದಾದಿ ಶಿಕ್ಷಣವೇ ಇಂದು ಹಿಂದುಳಿದ ವರ್ಗಗಳ ಬೆಳವಣಿಗೆಗೆ ನಮ್ಮ ಮುಂದಿರುವ ಬಹುದೊಡ್ಡ ಅಸ್ತ್ರ ಎಂದರು.ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ವೈದಿಕ ಪದ್ಧತಿಯನ್ನು ತಿರಸ್ಕರಿಸಿ ಕಾಯಕ ಸಮಾಜ ಪೋಷಿಸಿ ಸಂಘಟಿಸಿದರು. ಜಾತಿ, ಧರ್ಮ, ವೈದಿಕ ಶಾಹಿಯನ್ನು ಕಿತ್ತೊಗೆದು ಸಾತ್ವಿಕತೆಯನ್ನು ಚೆಲ್ಲಿದ್ದಾಗಿ ಹೇಳಿದರು.ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ರವಿಕುಮಾರ್ ಮಾತನಾಡಿ, ಮಡಿವಾಳ ಮಾಚಿದೇವರ ಜಯಂತಿಗೆ ಮೇಲ್ಪಂತಿ ಹಾಕಿದವರು ಸಿದ್ದರಾಮಯ್ಯ. ಸಮ ಸಮಾಜದ ಬಗೆಗಿನ ಕೀಳರಿಮೆಯ ಭಾವನೆಗಳನ್ನು ಇಟ್ಟುಕೊಂಡು, ಹೊರಗಡೆಯ ನೋವುಗಳನ್ನು ಅನುಭವಿಸಿದರೆ ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ಮೇಲೆ ಸಂವಿಧಾನವನ್ನು ಪದೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಮಡಿವಾಳ ಸಮಾಜದ ಶೇ. 90ರಷ್ಟು ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.ಈ ವೇಳೆ ಎ.ಡಿ.ಎಲ್.ಆರ್. ಮಂಜುನಾಥ್, ಪಿಕೆಟಿಬಿ ಆಸ್ಪತ್ರೆಯ ಡಾ. ಪ್ರಸಾದ್, ಡಾ. ಪ್ರಶಾಂತ್, ಸಂತೋಷ್ ಕಿರಾಳು, ಕರ್ನಾಟಕ ಪವರ್ ಸಂಪಾದಕ ಡಿ.ಎನ್. ಬಾಬು, ಸಮಾಜ ಸೇವಕ ಸಿ. ಬಾಲಚಂದ್ರನ್, ಜೋಗಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು.ಚಿತ್ರದುರ್ಗದ ಮಾಚಿದೇವ ಸಂಸ್ಥಾನ ಮಠದ ಪೀಠಾಧಿಪತಿ. ಶ್ರೀ ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ದ್ಯಾವಪ್ಪ ನಾಯಕ, ಜಯರಾಜ್ ಹೆಗಡೆ, ಸಮಿತಿಯ ಗೌರವಾಧ್ಯಕ್ಷ ಬಿ.ಜಿ. ಕೇಶವ, ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಉಪಾಧ್ಯಕ್ಷ ಕುರುಬೂರು ಮಹಾದೇವಸ್ವಾಮಿ, ಹರ್ಷವರ್ಧನ್ ಸಾಲಿಗ್ರಾಮ, ಕೃಷ್ಣಯ್ಯ ಕೆ.ಆರ್. ನಗರ, ಸಿ.ಎಸ್. ಮಹೇಶ್, ರವಿ ಚಿಲಕುಂದ ಹಾಗೂ ಖಜಾಂಚಿ ರವಿಚಂದ್ರ, ಸಂಘಟನಾ ಕಾರ್ಯದರ್ಶಿ ಮಂಜು, ನಾಗರಾಜು, ಕಿರಾಳು ಸಂತೋಷ್, ಬಸವರಾಜು, ಆಲುಗೂಡು ಶ್ರೀರಾಮ್, ಚಿಕ್ಕಹೊನ್ನಶೆಟ್ಟಿ, ವೆಂಕಟೇಶ್, ವಸಂತಕುಮಾರಿ, ಜಯಲಕ್ಷ್ಮಿ, ಕುಮಾರ್, ಕಾಂತರಾಜು ರಮೇಶ್, ವಿಶ್ವನಾಥ್, ರಾಜಣ್ಣ, ರೇಚಣ್ಣ, ಶ್ರೀನಿವಾಸ್, ಮಹೇಶ್, ವೆಂಕಟೇಶ್ ಮೊದಲಾದವರು ಇದ್ದರು.