ಹರಪನಹಳ್ಳಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಾಲೂಕಿನಲ್ಲಿ ಭಾರಿ ಹಗರಣ ನಡೆದಿದ್ದು, ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ನಗರದ ಕೃಷಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರೈತರು ಅಧಿಕಾರಿಗಳನ್ನು ಆಗ್ರಹಿಸಿದರು.ಈ ಹಿಂದೆ ಹಾರಕನಾಳು ಗ್ರಾಪಂ ಕಚೇರಿಗೆ ಈ ವಿಚಾರವಾಗಿ ಕಿಸಾನ್ ಸಭಾ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಅವ್ಯವಹಾರದ ಕುರಿತು ಆರೋಪ ಮಾಡಿದ್ದರು. ಈ ಸಂಬಂಧ ಸಭೆ ಕರೆಯಲಾಗಿತ್ತು.
ಸತ್ತವರ ಹೆಸರಿನಲ್ಲಿ ಇನ್ಸೂರೆನ್ಸ್ ಕ್ಲೇಮ್ ಆಗಿದೆ. ಕೋಟಿ ಕೋಟಿ ಹಣ ಲೂಟಿಯಾಗಿದೆ. ಸರಿಯಾದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸಂತೋಷ ಗುಳೇದಹಟ್ಟಿ ತಾಂಡ ಮಾತನಾಡಿ, ಹಾರಕನಾಳು, ತೆಲಿಗಿ, ತೊಗರಿಕಟ್ಟೆ ಗ್ರಾಪಂಗಳಲ್ಲಿ ಭ್ರಷ್ಟ ಅಧಿಕಾರಿಗಳ ಹಾಗೂ ಇನ್ಸೂರೆನ್ಸ್ ಕಂಪನಿ ಮಧ್ಯವರ್ತಿಗಳ ಕೈಚಳಕದಿಂದ ಕೋಟಿ ಕೋಟಿ ಹಣ ಲೂಟಿಯಾಗಿದೆ. ಬೇರೆ ಬೇರೆ ಹೊಲಗಳಲ್ಲಿ ನಕಲಿ ಜಿಪಿಎಸ್ ಪೋಟೊಗಳನ್ನು ತೆಗೆದು ಇನ್ಸೂರೆನ್ಸ್ ಪಡೆಯುವ ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಗುಡಟಿಹಳ್ಳಿ ಹಾಲೇಶ ಮಾತನಾಡಿ, ಫಸಲ್ ಬಿಮಾ ವಿಮಾ ಯೋಜನೆಯಲ್ಲಿ ದೊಡ್ಡ ಹಗರಣ ನಡೆದಿದೆ. ಮಧ್ಯವರ್ತಿಗಳಿಗೆ ಹಣ ಬಂದಿದೆ. ರೈತರಿಗೆ ನಷ್ಟವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ರೈತರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರು ಸಭೆಗೆ ಆಗಮಿಸಿ ಗಲಾಟೆ ಆಗದಂತೆ ತಡೆದರು. ಸಹಾಯಕ ಕೃಷಿ ನಿರ್ದೆಶಕ ಉಮೇಶ ಮಾತನಾಡಿ ಸತ್ತವರ ಹೆಸರಲ್ಲಿ ಇನ್ಸೂರೆನ್ಸ್ ಪಾವತಿಗೆ ಬರುವುದಿಲ್ಲ, ಫಸಲ್ ಭೀಮಾ ಯೋಜನೆಯ ಕುರಿತು ಕೆಲವೊಂದು ಮಾಹಿತಿಯನ್ನು ರೈತರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ತಹಶೀಲ್ದಾರ ಬಿ.ವಿ. ಗಿರೀಶಬಾಬು ಸಮಸ್ಯೆ ಸರಿಯಾಗಿ ತಿಳಿಸಿ ವಾಗ್ವಾದ ಬೇಡ ಎಂದು ಹೇಳಿದರೂ ಸಭೆಯಲ್ಲಿ ಗದ್ದಲ ನಿಲ್ಲದಿರುವುದರಿಂದ ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು. ಜಿಲ್ಲಾ ಸಂಖ್ಯಾಶಾತ್ರ ಇಲಾಖೆಯ ಪತ್ರೇಶಪ್ಪ, ತಾಪಂ ಇಒ ವೈ.ಎಚ್. ಚಂದ್ರಶೇಖರ, ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.