ಪೊಲೀಸ್‌ ಕಮಿಷನರೇಟ್‌ನಲ್ಲಿ ಮೇಜರ್‌ ಸರ್ಜರಿ!

KannadaprabhaNewsNetwork | Published : Jul 17, 2024 12:48 AM

ಸಾರಾಂಶ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಮಹಾನಗರದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿದ್ದವು. ಇದರೊಂದಿಗೆ ಕಳೆದ ಆರೇಳು ತಿಂಗಳ ಹಿಂದೆ ಒಂದು ವಾರ ದಿನಕ್ಕೊಂದರಂತೆ ಕೊಲೆ ಪ್ರಕರಣಗಳು ನಗರದ ನಾಗರಿಕರ ನಿದ್ದೆ ಗೆಡಿಸಿದ್ದವು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಕೊಲೆ, ಸುಲಿಗೆ, ದರೋಡೆ ಮಾಮೂಲಿ ಎಂಬಂತಾಗಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಇತಿಶ್ರೀ ಹಾಡಲು ವಿವಿಧ ಠಾಣೆಗಳಲ್ಲಿನ ಬರೋಬ್ಬರಿ 200ಕ್ಕೂ ಅಧಿಕ ಸಿಬ್ಬಂದಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಪೊಲೀಸ್‌ ಕಮಿಷನರೇಟ್‌ನ ಆಡಳಿತಕ್ಕೆ ನೂತನ ಕಮಿಷನರ್‌ ಈ ಮೂಲಕ ಚುರುಕು ಮುಟ್ಟಿಸಿದ್ದಾರೆ.

ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಮಹಾನಗರದಲ್ಲಿ ಭಾರೀ ಸಂಚಲನವನ್ನೇ ಉಂಟು ಮಾಡಿದ್ದವು. ಇದರೊಂದಿಗೆ ಕಳೆದ ಆರೇಳು ತಿಂಗಳ ಹಿಂದೆ ಒಂದು ವಾರ ದಿನಕ್ಕೊಂದರಂತೆ ಕೊಲೆ ಪ್ರಕರಣಗಳು ನಗರದ ನಾಗರಿಕರ ನಿದ್ದೆ ಗೆಡಿಸಿದ್ದವು. ಇವಷ್ಟೇ ಅಲ್ಲದೇ, ಕೊಲೆಗೆ ಯತ್ನ, ಕಳ್ಳತನ, ಗಾಂಜಾ ಮಾರಾಟದಂತಹ ಪ್ರಕರಣಗಳು ಮಾಮೂಲಿ ಎಂಬಂತಾಗಿತ್ತು. ಎಲ್ಲರೂ ಪೊಲೀಸ್‌ ಕಮಿಷನರ್‌ರತ್ತ ಬೊಟ್ಟು ತೋರಿಸಲಾರಂಭಿಸಿದ್ದರು. ಸಂಘ ಸಂಸ್ಥೆಗಳು, ಸಾರ್ವಜನಿಕರು ಪೊಲೀಸ್‌ ಇಲಾಖೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು ಅಲ್ಲದೇ, ಕಮಿಷನರ್‌ ಬದಲಾವಣೆಗೆ ಪಟ್ಟು ಹಿಡಿದು ಪ್ರತಿಭಟನೆ ಕೂಡ ನಡೆದಿತ್ತು.

ಕೊನೆಗೆ ಸರ್ಕಾರ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದಲ್ಲಿ ಡಿಸಿಪಿ, ಪಿಐ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿತ್ತು. ಬಳಿಕ ಕೆಲವೇ ದಿನಗಳಲ್ಲಿ ಕಮಿಷನರ್‌ರನ್ನು ಇಲ್ಲಿಂದ ಎತ್ತಂಗಡಿ ಮಾಡಿ ಎನ್‌. ಶಶಿಕುಮಾರ ಅವರನ್ನು ಕಳೆದ 10 ದಿನಗಳ ಹಿಂದೆಯಷ್ಟೇ ನಿಯೋಜಿಸಿತ್ತು.

ಬಿಸಿ ಮುಟ್ಟಿಸಿರುವ ಕಮಿಷನರ್‌:

ಈ ನಡುವೆ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ ಪೊಲೀಸ್‌ ಕಮಿಷನರೇಟ್‌ಗೆ ಖದರ್‌ ತರುವ ಕೆಲಸಕ್ಕೆ ಕೈ ಹಚ್ಚಿದ್ದಾರೆ. ಪ್ರತಿನಿತ್ಯ ಸ್ವತಃ ತಾವೇ ಫಿಲ್ಡಿಗಿಳಿದು ಒಂದು ಸುತ್ತು ಹಾಕುತ್ತಿದ್ದಾರೆ. ರೌಡಿಶೀಟರ್‌ ಪರೇಡ್‌, ಹಳೆ ಕಳ್ಳತನ, ಕೊಲೆ ಪ್ರಕರಣಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಗಳನ್ನೆಲ್ಲ ಮಾಡುತ್ತಿದ್ದಾರೆ.

ತಡರಾತ್ರಿ ವರೆಗೂ ಪ್ರಾರಂಭವಾಗಿರುತ್ತಿದ್ದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಮದ್ಯದಂಗಡಿ, ಸಾವಜಿ ಖಾನಾವಳಿಗಳನ್ನೆಲ್ಲ ಸರಿಯಾದ ಸಮಯ ಬಾಗಿಲು ಮುಚ್ಚುವಂತೆ ಮಾಡಿದ್ದಾರೆ. ರಾತ್ರಿ ವೇಳೆ ಖಾಲಿ ನಿವೇಶನ, ರಸ್ತೆ ಬದಿಗಳಲ್ಲಿ ಕುಡಿದು ಕುಪ್ಪಳಿಸುತ್ತಿದ್ದವರನ್ನು ವಶಕ್ಕೆ ಪಡೆದು ಬುದ್ಧಿವಾದ ಹೇಳಿದ್ದಾರೆ.

203ಕ್ಕೂ ಅಧಿಕ ಜನರ ವರ್ಗ:

ಕಳೆದ ಐದಾರು ವರ್ಷದಿಂದ ಒಂದೇ ಠಾಣೆಗಳಲ್ಲಿ ಠಿಕಾಣಿ ಹೂಡಿದ್ದ ಎಎಸ್‌ಐ, ಎಚ್‌ಸಿ, ಪಿಸಿಗಳಂತಹ ಸಿಬ್ಬಂದಿಗಳನ್ನೇ ವರ್ಗಾವಣೆ ಮಾಡಿದ್ದಾರೆ. ಏಕಕಾಲಕ್ಕೆ ಏಳು ಜನ ಎಎಸ್‌ಐ, ಎಚ್‌ಸಿ, ಮಹಿಳಾ ಪಿಸಿ, ಪಿಸಿಗಳು ಸೇರಿದಂತೆ ಬರೋಬ್ಬರಿ 203 ಜನ ಸಿಬ್ಬಂದಿಯನ್ನು ವರ್ಗಾಹಿಸಿ ಆದೇಶಿಸಿದ್ದಾರೆ. ಈ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ. ಜತೆ ಜತೆಗೆ ಒಂದೇ ಠಾಣೆಯಲ್ಲಿ ತಮ್ಮದೇ ದರ್ಬಾರು ನಡೆಸುತ್ತಿದ್ದ ಸಿಬ್ಬಂದಿಯ ಚಳಿ ಬಿಡಿಸಿದ್ದಾರೆ.

ಇದು ಕಾಯಂ ಆಗಲಿ:

ನೂತನ ಕಮಿಷನರ್‌ ಆಡಳಿತ ಸ್ವೀಕರಿಸಿದ ಮೇಲೆ ಪೊಲೀಸ್‌ ಕಮಿಷನರೇಟ್‌ಗೆ ಒಂದು ಖದರ್‌ ಬಂದಿದೆ. ಪೊಲೀಸ್‌ ಬಗ್ಗೆ ಪುಡಾರಿಗಳಿಗೆ ಭಯ ಹುಟ್ಟಿದೆ. ಆದರೆ ಇದು ಬರೀ ಈಗಷ್ಟೇ ಆಗಬಾರದು. ಕಮಿಷನರ್‌ ಕೂಡ ಆರಂಭಿಕ ಶೂರತ್ವದಂತೆ ಆಗದೇ ನಿರಂತರವಾಗಿ ನಡೆಯಬೇಕು. ಹುಬ್ಬಳ್ಳಿ ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಿನಿಂದ ಪಾಲನೆಯಾಗಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

Share this article