ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಮಕರ ಸಂಕ್ರಾಂತಿ ಸಡಗರ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಕರ ಸಂಕ್ರಾಂತಿಯ ದೊಡ್ಡ ಮಟ್ಟದ ಸಾಮೂಹಿಕ ಆಚರಣೆ ದ.ಕ.ದಲ್ಲಿ ಅಷ್ಟಾಗಿ ಕಂಡುಬಂದಿಲ್ಲವಾದರೂ, ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಮಕರ ಸಂಕ್ರಮಣ, ಧನುರ್ಮಾಸಾಂತ್ಯದ ಸಂಭ್ರಮ ಮನೆ ಮಾಡಿತ್ತು.ಮುಂಜಾನೆಯಿಂದಲೇ ಭಕ್ತಾದಿಗಳು ದೇವಸ್ಥಾನ, ದೈವಸ್ಥಾನಗಳಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ದಿನದ ವಿಶೇಷದ ಅಂಗವಾಗಿ ಎಳ್ಳು- ಬೆಲ್ಲ ಹಂಚಿ ಸವಿದರು.
ಈ ಶುಭ ದಿನದಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮತ್ತು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಆರಂಭವಾದರೆ, ಮಂಗಳಾದೇವಿ, ಕುದ್ರೋಳಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು.ಕದ್ರಿ ದೇವಾಲಯ ಜಾತ್ರೋತ್ಸವ ಅಂಗವಾಗಿ ಬೆಳಗ್ಗೆ ತೀರ್ಥಸ್ನಾನ, ಸಂಜೆ ಧ್ವಜಾರೋಹಣ ನೆರವೇರಿತು. ದೇವಸ್ಥಾನದ ಕೆರೆಯಲ್ಲಿ ಮುಂಜಾನೆ 5ರಿಂದಲೇ ತೀರ್ಥಸ್ನಾನ ನಡೆದಿದ್ದು, ಸಂಜೆ 6.30ರ ವೇಳೆಗೆ ಏಳುಪಟ್ಟಣ ಮೊಗವೀರ ಮಹಾಸಭಾದವರಿಂದ ಧ್ವಜಸ್ತಂಭ ಆರೋಹಣ ನೆರವೇರಿತು. ಬಳಿಕ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ 10ಕ್ಕೆ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ ಬೆಳಗಿಸಲಾಯಿತು. ಮಲರಾಯ ದೈವದ ಭೇಟಿ, ಕಂಚಿಲು ಸೇವೆ ಮತ್ತು ಸಣ್ಣ ರಥೋತ್ಸವ ನೆರವೇರಿತು. ಜ.21ರಂದು ಸಂಜೆ 6ಕ್ಕೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ ನಡೆಯಲಿದೆ.ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಧನುರ್ಮಾಸಾಂತ್ಯ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ಉಡುಪಿ: ಮಕರ ಸಂಕ್ರಮಣದ ಮೂರು ತೇರು ಉತ್ಸವ ಸಂಪನ್ನಉಡುಪಿಯಲ್ಲಿ ಜಗದ್ಗುರು ಮಧ್ವಾಚಾರ್ಯರು ಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನ, ಸಪ್ತೋತ್ಸವದ ಕೊನೆಯ ದಿನ, ಮಂಗಳವಾರ ರಾತ್ರಿ, ಮಕರ ಸಂಕ್ರಮಣದ ಪ್ರಯುಕ್ತ ರಥಬೀದಿಯಲ್ಲಿ ಮೂರು ತೇರು ಉತ್ಸವ ವೈಭವದಿಂದ ನಡೆಯಿತು.ಇದಕ್ಕೆ ಪೂರ್ವಭಾವಿಯಾಗಿ ಮಧ್ಯಾಹ್ನ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ರಥಕ್ಕೆ ಶಿಖರಾರೋಹಣ ನಡೆಯಿತು. ರಥದ ಶಿಖರದಲ್ಲಿರುವ ಕಲಶಕ್ಕೆ ಪೂಜೆ ಸಲ್ಲಿಸಿ, ನಂತರ ರಥದ ತುದಿಗೆ ಅಳವಡಿಸಲಾಯಿತು.ರಾತ್ರಿ ಸುಮಾರು 7 ಗಂಟೆಗೆ ರಥಕ್ಕೆ ದೇವರನ್ನು ಆರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಮಳೆಯಾಗಿ ರಥಬೀದಿ ತಂಪಾಯಿತು. ಕೆಲಕಾಲ ಸುರಿದ ಮಳೆಯ ನಡುವೆಯೂ ನೂರಾರು ಮಂದಿ ಭಕ್ತರು ಮೂರು ರಥಗಳನ್ನು ಎಳೆದು ಸಂಭ್ರಮಿಸಿದರು. ಅನಿರೀಕ್ಷಿತ ಮಳೆ ರಥೋತ್ಸವದ ಉತ್ಸಾಹಕ್ಕೆ ಸ್ವಲ್ಪಮಟ್ಟಿನ ತಣ್ಣೀರೆರೆಚಿತು.ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಆಸ್ಟ್ರೇಲಿಯದ ಸಂಸದ ಜಾನ್ ಮುಲ್ಲಾಯ್ ಈ ರಥೋತ್ಸವದಲ್ಲಿ ಭಾಗವಹಿಸಿದ್ದರು.ಸಂಜೆ ಗೀತಾಮಂದಿರದಲ್ಲಿ ಪರ್ಯಾಯ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ವಿಶ್ವಗೀತಾ ಕ್ವಿಜ್ ಸ್ಪರ್ಧೆಯ ಕಚೇರಿ - ಕೃಷ್ಣಗೀತಾನುಭವ ಮಂಟಪವನ್ನು ಆಸ್ಟ್ರೇಲಿಯದ ಸಂಸದ ಜಾನ್ ಮುಲ್ಲಾಯ್ ಉದ್ಘಾಟಿಸಿದರು. ಮಠದ ದಿವಾನಾರದ ನಾಗರಾಜ್ ಆಚಾರ್ಯ ಮತ್ತು ಶ್ರೀಗಳ ಅಂತಾರಾಷ್ಚ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.ನಂತರ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಾನ್ ಮುಲ್ಲಾಯ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ನವದೆಹಲಿಯ ಸಿಬಿಎಸ್‌ಸಿ ಎಫಿಲಿಯೇಶನ್ ಯೂನಿಟ್‌ನ ಅಧ್ಯಕ್ಷ ಜಯಪ್ರಕಾಶ್ ಚತುರ್ವೇದಿ, ಶ್ರೀ ಮಠದ ವಿಶೇಷ ಭಕ್ತರಾದ ಆಸ್ಟ್ರೇಲಿಯಾದ ರಮೇಶ್ ಮತ್ತು ಅಶ್ವಿನ್ ವೇದಿಕೆಯಲ್ಲಿದ್ದರು. ವಿದ್ವಾಂಸರಾದ ಗೋಪಾಲಾಚಾರ್ಯರು ಕಾರ್ಯಕ್ರಮ ಸಂಯೋಜಿಸಿದರು.