ಕನ್ನಡಪ್ರಭ ವಾರ್ತೆ ರಾಯಚೂರುದಕ್ಷಿಣಾಯನ ಕಳೆದು ಉತ್ತರಾಯಣ ಪೂರ್ವಕಾಲ, ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಮಂಗಳವಾರ ಆಚರಿಸಲಾಯಿತು.ರಾಯಚೂರು ಜಿಲ್ಲಾ ಕೇಂದ್ರ ಸೇರಿ ಮಾನ್ವಿ, ಸಿರವಾರ, ದೇವದುರ್ಗ, ಲಿಂಗಸುಗೂರು, ಮಸ್ಕಿ, ಸಿಂಧನೂರು, ಅರಕೇರಾ ತಾಲೂಕು ಕೇಂದ್ರಗಳ ನಗರ ಪಟ್ಟಣ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ಮನೆಗಳ್ಲಿ ಮಕರ ಸಂಕ್ರಮಣದ ಸಂಭ್ರಮವು ಎದ್ದು ಕಂಡಿತು.ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಳಗಿನ ಜಾವ ಮನೆಗಳ ಮುಂದೆ ಯುವತಿಯರು, ಗೃಹಿಣಿಯರು, ಮಹಿಳೆಯರು ವಿಧವಿಧದ ರಂಗವಲ್ಲಿಗಳನ್ನು ಬಿಡಿಸಿ ಗೋಪಮ್ಮ ಳನ್ನು ಕೂಡಿಸಿ ಪೂಜೆಯನ್ನು ನೆರವೇರಿಸಿದರು. ಮನೆಯಲ್ಲಿ ದೇವರುಗಳಿಗೆ ನೈವೇದ್ಯ ಸಮರ್ಪಿಸಿ ಪೂಜೆ ಮಾಡಿದರು. ನಂತರ ಸಮೀಪದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಮಾಡಿ ದೇವರದರ್ಶನ ಪಡೆದು ಪ್ರಾರ್ಥಿಸಿದರು. ತುಂಗಭದ್ರಾ ತಟದ ವ್ಯಾಪ್ತಿಗೆ ಬರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಎಲೆ ಬಿಚ್ಚಾಲಿಯ ಜಪದಕಟ್ಟೆ, ಪಂಚಮುಖಿ ಗಾಣಧಾಳ, ಮಾನ್ವಿ ಯ ಚೀಕಲಪರ್ವಿಯ ವಿಜಯದಾಸರ ಕಟ್ಟೆ, ಸಿಂಧನೂರಿನ ಅದೇ ರೀತಿ ಕೃಷ್ಣಾ ನದಿ ತಟದ ವ್ಯಾಪ್ತಿಯ ರಾಯಚೂರು ತಾಲೂಕಿನ ದೇವಸುಗೂರು, ಕುರುವಪುರ, ನಾರದಗಡ್ಡೆ, ಎಲೆ ಬಿಚ್ಚಾಲಿ, ದೇವದುರ್ಗ ತಾಲೂಕಿನ ಗೂಗಲ್ ಪ್ರಭುಸ್ವಾಮಿ, ಕೃಷ್ಣಾ, ಕೊಪ್ಪರ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಅಣೆ ಮಲ್ಲೇಶ್ವರ ಗುಡಿ ಸೇರಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಜನರು ಪುಣ್ಯಸ್ನಾನ ಮಾಡಿದ್ದು ಕಂಡು ಬಂತು. ಉಭಯ ನದಿಗಳಿಗೆ ತಂಡೋಪತಂಡವಾಗಿ ಆಗಮಿಸಿದ ಜನ ನದಿಯಲ್ಲಿ ಮಿಂದು ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ಉತ್ತರಾಯಣದ ಪೂರ್ವ ಕಾಲದ ಸಂಕ್ರಮಣ ಪವಿತ್ರ ದಿನದಂದು ಕುಟುಂಬಸ್ಥರೊಂದಿಗೆ ಸಮೀಪದ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಿಗೆ ತೆರಳಿ ಪುಣ್ಯ ಸ್ನಾನ ಮಾಡಿ, ನಾನಾ ಧಾರ್ಮಿಕ ಕ್ಷೇತ್ರ, ಗುಡಿ-ಗುಂಡಾರಗಳಿಗೆ ಪೂಜೆ ಸಲ್ಲಿಸಿ, ಕುಟುಂಬಸ್ಥರೊಂದಿಗೆ ಹಬ್ಬದೂಟವನ್ನು ಸವಿದರು. ಇನ್ನೂ ಕೆಲವೆಡೆ ಹಬ್ಬದ ದಿನ ಗ್ರಾಮೀಣ ಕ್ರೀಡೆಗಳು ನಡೆದವು, ಮಕ್ಕಳು, ಯುವಕರು ಸಹ ಗಾಳಿಪಟ ಹಾರಿಸಿ ಸಂಭ್ರಮಿಸಿದರು.ಮಂತ್ರಾಲಯಕ್ಕೆ ಹರಿದು ಬಂದ ಭಕ್ತರುಮಕರ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ರಾಜ್ಯ ಸೇರಿ ದೇಶದ ವಿವಿಧ ಪ್ರದೇಶಗಳಿಂದ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು.ಹಬ್ಬ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಸುಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಬೆಳಗ್ಗೆಯಿಂದಲೆಯೇ ತುಂಗಭದ್ರಾ ನದಿಗೆ ತೆರಳಿ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ನಿಂತಿದ್ದ ನೀರಿನಲ್ಲಿ ಸಂಕ್ರಮಣದ ಪುಣ್ಯ ಸ್ನಾನಗೈದು,ನದಿಗೆ ಪೂಜೆ ಮಾಡಿ, ಭಾಗೀನ ಅರ್ಪಿಸಿದರು. ನಂತರ ಶ್ರೀ ಗುರು ಸಾರ್ವಭೌಮರ ಮೂಲ ಬೃಂದಾವನದ ದರ್ಶನ ಪಡೆದು ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಗಮಿಸಿದ್ದರಿಂದ ಶ್ರೀಮಠದಿಂದ ವಸತಿ, ಕುಡಿಯುವ ನೀರು, ಅನ್ನಪ್ರಸಾದ ಸೇರಿ ರಾಯರ ದರ್ಶನಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು.ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸಿದ ನಟ ಮಾ.ಆನಂದ್
ಬಗೆಬಗೆಯ ಮೃಷ್ಟಾನ್ನ ಭೋಜನ : ಸಂಕ್ರಾಂತಿಯ ವಿಶೇಷವಾದ ಸಜ್ಜೆರೊಟ್ಟ, ಜೋಳದ ರೊಟ್ಟಿ, ಪುಂಡೆಪಲ್ಯ, ಬದನೆಕಾಯಿ, ಬರ್ಥ( ವಿವಿಧ ಬಗೆಯ ತರಕಾರಿಗಳಿಂದ ತಯಾರಿಸುವ ಪಲ್ಯ) ಶೇಂಗಾಯ್ ಹೋಳಿಗೆ, ಎಳ್ಳು ಹೋಳಿಗೆ ಸೇರಿದಂತೆ ಹಲವಾರು ಬಗೆ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ನದಿಯ ಪುಣ್ಯಸ್ನಾನದ ನಂತರ ಭೋಜನೆ ಸವಿದು ಸಂಭ್ರಮಿಸಿದರು.ರಂಗೋಲಿ ಅಲಂಕಾರ: ಸಂಕ್ರಾಂತಿಯ ಮತ್ತೊಂದು ವಿಶೇಷ ರಂಗೋಲಿಯನ್ನು ಪ್ರತಿಯೊಂದು ಮನೆಯ ಮುಂದೆ ರೈತ, ಎತ್ತಿನ ಬಂಡಿ, ರೈತ ಬೆಳೆದ ಬೆಳೆಗಳ ಚಿತ್ರಗಳನ್ನು ರಂಗೋಲಿಯಲ್ಲಿ ಚಿತ್ರಿಸಿ ಅದರಲ್ಲಿ ಆಕಳ ಸಗಣಿಯಿಂದ ಗೊದ್ದೆಮ್ಮ ಮಾಡಿ, ಅದರಲ್ಲಿ ಸಜ್ಜೆ, ಜೋಳ, ಅಕ್ಕಿ, ಗೆಜ್ಜರಿ, ಬಾರೆ ಹಣ್ಣು ತುಂಬಿ ರೈತನ ಶ್ರಮವನ್ನು ಪೂಜಿಸಲಾಯಿತು.