ತುಮಕೂರು-ಶಿರಾ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿ: ಅರವಿಂದ ಬೆಲ್ಲದ

KannadaprabhaNewsNetwork | Published : Oct 21, 2024 12:38 AM

ಸಾರಾಂಶ

ಹೊಸ ವಿಮಾನ ನಿಲ್ದಾಣಕ್ಕೆ ಈಗಾಗಲೇ ಸರ್ಕಾರ 5-6 ಕಡೆಗೆ ಜಾಗ ಗುರುತಿಸುವ ಕೆಲಸ ಮಾಡುತ್ತಿದೆ. ಆದರೆ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಅಭಿವೃದ್ಧಿ ದಿಸೆಯಲ್ಲಿ ತುಮಕೂರು- ಶಿರಾ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎಂದು ಬೆಲ್ಲದ ಹೇಳಿದ್ದಾರೆ.

ಹುಬ್ಬಳ್ಳಿ: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯಸರ್ಕಾರ ಮುಂದಾಗಿರೋದು ಸ್ವಾಗತಾರ್ಹ. ತುಮಕೂರು- ಶಿರಾ ಭಾಗದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಲಿ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಈಗಾಗಲೇ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿ ಬಹಳಷ್ಟು ಯಶಸ್ವಿಯಾಗಿದೆ. ಆದರೆ, ಈ ವಿಮಾನ ನಿಲ್ದಾಣ ಕರ್ನಾಟಕ ಹಾಗೂ ಆಂಧ್ರದ ಗಡಿಭಾಗದಲ್ಲಿರುವ ಕಾರಣ ಇದರ ಸದುಪಯೋಗವನ್ನು ಹೆಚ್ಚಾಗಿ ಆಂಧ್ರಪ್ರದೇಶದ ಸರ್ಕಾರ ಪಡೆಯುತ್ತಿದೆ. ಹೊಸೂರು ಭಾಗದಲ್ಲಿ ನಿರ್ಮಾಣ ಮಾಡಲಾದ ಕೈಗಾರಿಕಾ ಪ್ರದೇಶ ರಾಜ್ಯಕ್ಕಿಂತ ಹೆಚ್ಚಾಗಿ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಹಾಗಾಗಿ ಇದೀಗ ಹೊಸ ವಿಮಾನ ನಿಲ್ದಾಣಕ್ಕೆ ಈಗಾಗಲೇ ಸರ್ಕಾರ 5-6 ಕಡೆಗೆ ಜಾಗ ಗುರುತಿಸುವ ಕೆಲಸ ಮಾಡುತ್ತಿದೆ. ಆದರೆ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಅಭಿವೃದ್ಧಿ ದಿಸೆಯಲ್ಲಿ ತುಮಕೂರು- ಶಿರಾ ಭಾಗದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎಂದರು.

ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ಉಪಚುನಾವಣೆಯಲ್ಲಿ ಮುಖ್ಯವಾಗಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಬೇಕಾಗುತ್ತದೆ. ಶಿಗ್ಗಾಂವಿ- ಸವಣೂರ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಗೆ ಭರತ್‌ ಬೊಮ್ಮಾಯಿ ಅಭ್ಯರ್ಥಿಯಾಗಿ ಪಕ್ಷ ನಿರ್ಧರಿಸಿದೆ. ರಾಜ್ಯ ನಾಯಕರು ಕಳುಹಿಸಿರುವ ಪಟ್ಟಿಯನ್ನೇ ಅಂತಿಮಗೊಳಿಸಿರುವ ಸಾಧ್ಯತೆಗಳಿವೆ. ಉಪ ಚುನಾವಣೆಯಲ್ಲಿ ಕುಟುಂಬದವರಿಗೆ ಟಿಕೆಟ್ ನೀಡಿದಾಕ್ಷಣ ಕುಟುಂಬ ರಾಜಕಾರಣ ಎಂದು ಹೇಳಲು ಬರುವುದಿಲ್ಲ. ಈ ನಿರ್ಧಾರ ಅಲ್ಲಿನ ಕಾರ್ಯಕರ್ತರ, ಜನರ ಅಭಿಪ್ರಾಯವಾಗಿದೆ ಎಂದರು.

ಕಾನೂನು ಕುಣಿಕೆ ಗಟ್ಟಿ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಕುಣಿಕೆ ಗಟ್ಟಿಯಾಗುತ್ತ ಹೋಗುತ್ತಿದೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಭವಿಷ್ಯ ಹೇಳುವುದಿಲ್ಲ. ಆದರೆ, ಅವರು ರಾಜೀನಾಮೆ ಕೊಡುವುದು ಅನಿವಾರ್ಯವಾಗಲಿದೆ. ಮುಡಾ ಸಿವಿಲ್ ಪ್ರಕರಣ ಎಂದು ಹೇಳುವ ಮೂಲಕ ಡಾ. ಜಿ. ಪರಮೇಶ್ವರ ಅವರು ಮುಖ್ಯಮಂತ್ರಿಗೆ ಆಪ್ತರಾಗಲು ಮುಂದಾಗಿದ್ದಾರೆ. ಅವರೂ ಸೇರಿ ಎಲ್ಲರಿಗೂ ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಗೊತ್ತಿದೆ. ಹಾಗಾಗಿ, ಈಗಲೇ ಟವೆಲ್ ಹಾಕಿಕೊಂಡು ಕುಳಿತಿದ್ದಾರೆ. ಡಾ. ಪರಮೇಶ್ವರ ತಮ್ಮನ್ನೇ ಶಿಫಾರಸು ಮಾಡಲಿ ಎಂದುಕೊಂಡು ಅವರ ಪರ ಬ್ಯಾಟಿಂಗ್‌ ಮಾಡಿರಬಹುದು ಎಂದು ಟಾಂಗ್ ನೀಡಿದರು.

ಇದೇ ರೀತಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾ‌ರ್, ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ ಸೇರಿ ಹಲವರು ಸರದಿಯಲ್ಲಿ ನಿಂತಿದ್ದಾರೆ ಎಂದರು.

ನಿರ್ಧಾರ ಸರಿಯಲ್ಲ

ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳು 17 ಬಾರಿ ಜಾಮೀನು ಅರ್ಜಿ ಸಲ್ಲಿಸಿದರೂ ಕೋರ್ಟ್ ನಲ್ಲಿ ತಿರಸ್ಕೃತಗೊಂಡಿದೆ. ಎನ್‌ಐಎ ಕೂಡ ತನಿಖೆ ನಡೆಸುತ್ತಿದೆ. ಇಂತಹ ಪ್ರಕರಣ ವಾಪಸ್‌ ಪಡೆದ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಈ ವಿಚಾರದಲ್ಲಿ ವಕೀಲರು ಕಾನೂನು ಹೋರಾಟ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಿಪಿವೈ ಪರ ಒಲವಿದೆ

ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ ಮೈತ್ರಿ ಅಭ್ಯರ್ಥಿಯಾಗುವ ಬಗ್ಗೆ ಒಲವಿದೆ. ಈ ಬಗ್ಗೆ ಪಕ್ಷದಲ್ಲಿ ಈಗಾಗಲೇ ಚರ್ಚೆಯೂ ನಡೆದಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಪ್ರಬುದ್ಧ ರಾಜಕಾರಣಿ. ಅವರು ಅಭ್ಯರ್ಥಿ ಕುರಿತು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಭರವಸೆ. ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಈ ವೇಳೆ ಶಾಸಕ ಎಂ.ಆ‌ರ್. ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ರವಿ ನಾಯಕ ಸೇರಿದಂತೆ ಹಲವರಿದ್ದರು.

Share this article