ಶ್ರೀ ದೊಡ್ಡಬಸವೇಶ್ವ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ

KannadaprabhaNewsNetwork | Published : Mar 13, 2024 2:04 AM

ಸಾರಾಂಶ

ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುರುಗೋಡು

ಪಟ್ಟಣದಲ್ಲಿ ದೊಡ್ಡಬಸವೇಶ್ವರ ಜಾತ್ರೆ ಮಾ. 25ರಂದು ನಡೆಯಲಿದೆ. ರಥೋತ್ಸವದಲ್ಲಿ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ. ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಸೂಚಿಸಿದರು.

ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಾರ್ಚ್ 25ರಂದು ರಥೋತ್ಸವ ದಿನದಂದೇ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಇಲಾಖೆಗೆ ಸೂಚಿಸಿದರು.

ರಥ ಸಾಗುವ ಮಾರ್ಗದಲ್ಲಿ ವಿದ್ಯುತ್ ಲೈನ್ ಸರಿದೂಗಿಸುವ ಬಗ್ಗೆ ಸಂಬಂಧಿಸಿದವರು ಮುಂಜಾಗ್ರತೆ ವಹಿಸಬೇಕು. ರಾತ್ರಿ ಸಮಯದಲ್ಲಿ ವಿದ್ಯುತ್‌ ಕಡಿತವಾಗದಂತೆ ಜಾಗೃತಿ ವಹಿಸಬೇಕು. ಆರೋಗ್ಯ ಸೇವೆ ಕಲ್ಪಿಸಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಗೆ ಸೂಚಿಸಿದರು. ರಥ ಸಾಗುವ ಎರಡೂ ಬದಿಯಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಹಾಕಬಾರದು. ಫ್ಲೆಕ್ಸ್ ಮತ್ತು ಬಂಟಿಂಗ್ಸ್ ಕಟ್ಟದಂತೆ ಎಚ್ಚರ ವಹಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್‌ ವಹಿಸಬೇಕು. ಪುರಸಭೆಯಿಂದ ರಸ್ತೆ ದುರಸ್ತಿ, ಬೀದಿ ದೀಪ, ಕುಡಿಯುವ ನೀರು ಸೇರಿ ವಿವಿಧ ಕಾಮಗಾರಿಗ‍ಳನ್ನು ಅಚ್ಚುಕಟ್ಟಾಗಿ ನೆರವೇರಿಸಿ ಎಂದರು.

ತಾಪಮಾನ ಹೆಚ್ಚಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯವರು ದಾಸೋಹಕ್ಕೆ ಬರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ ಕೈಗೊಳ್ಳಿ ಎಂದು ಹೇಳಿದರು.

ದೇವಸ್ಥಾನದ ನಾಲ್ಕು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹನುಮಂತಪ್ಪ ಮಾತನಾಡಿ, ಈ ವರ್ಷವೂ ತೇರಿನ ಸೂಕ್ತ ಪರಿಶೀಲನೆ ನಡೆಸಿ ಜನರಿಗೆ ದೇವರ ದರ್ಶನ ಪಡೆದುಕೊಳ್ಳಲು ಮುಕ್ತ ಅವಕಾಶ, ಶುದ್ಧ ಕುಡಿಯುವ ನೀರು, ದಾಸೋಹ ವ್ಯವಸ್ಥೆ, 5 ಶೌಚಾಲಯವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಶಾಸಕ ಗಣೇಶ್ ಮಾತನಾಡಿ, ರಥೋತ್ಸವಕ್ಕೂ ಮೊದಲು ಗ್ರಾಮೀಣ ರಸ್ತೆಗಳನ್ನು ಸರಿಪಡಿಸಬೇಕು ಹಾಗೂ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ರಥೋತ್ಸವ ಯಶಸ್ವಿಗೆ ಎಲ್ಲರೂ ಕೈ ಜೋಡಿಸೋಣ ಎಂದರು.

ರಥೋತ್ಸವ ಸಾಗುವ ದಾರಿಯಲ್ಲಿ ಹೂ, ಹಣ್ಣು, ಕಾಯಿ ವ್ಯಾಪಾರಸ್ಥರು ತೆಗ್ಗು ಗುಂಡಿಗಳನ್ನು ತೋಡಿಕೊಂಡಿರುತ್ತಾರೆ. ಇದರಿಂದ ಸೊನ್ನೆ ಹಾಕೋರಿಗೆ ಸಮಸ್ಯೆ ಆಗುತ್ತದೆ. ಆದ್ದರಿಂದ ಅದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೊನ್ನೆ ಹಾಕುವವರು ಕೋರಿದರು.

ಸೋಮಲಾಪುರ ಹಾಗೂ ಮುಷ್ಟಗಟ್ಟೆಯಿಂದ ಶ್ರೀ ದೊಡ್ಡಬಸವೇಶ್ವ ದೇವಸ್ಥಾನಕ್ಕೆ ಕುಂಭ ಹೊತ್ತು ತರುವರಿಗೆ ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಆದ್ದರಿಂದ ಅವರಿಗೆ ರಸ್ತೆ ವ್ಯವಸ್ಥೆ ಸೇರಿ ಇತರೆ ವ್ಯವಸ್ಥೆ ಕಲ್ಪಿಸಿ ಎಂದು ಎರಡು ಗ್ರಾಮದ ಮುಖಂಡರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಹೇಮಂತ್‌ ಕುಮಾರ್, ಎಸ್ಪಿ ರಂಜಿತ್‌ ಕುಮಾರ್ ಬಂಡಾರು ಇದ್ದರು. ತಹಸೀಲ್ದಾರ್ ಎಂ. ರೇಣುಕಾ, ಡಿವೈಎಸ್ಪಿ ಪ್ರಸಾದ್ ಗೋಖಲೆ, ಸಿಪಿಐ ವಿಶ್ವನಾಥ ಹಿರೇಗೌಡ, ಎಸ್ಐ ಸುಪ್ರೀತ್ ವಿರೂಪಕ್ಷಪ್ಪ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಹನುಮಂತಪ್ಪ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Share this article