ಅಂಬೇಡ್ಕರ್‌ ಕನಸು ನನಸು ಮಾಡೋಣ: ಸಚಿವ ಜಮೀರ್ ಅಹ್ಮದ್ ಖಾನ್

KannadaprabhaNewsNetwork | Published : Jan 27, 2025 12:45 AM

ಸಾರಾಂಶ

ದೇಶದಲ್ಲಿ ಸಂವಿಧಾನ ರಚನೆಯಿಂದಾಗಿ ಸಮಾನತೆ ನಿರ್ಮಾಣ ಸಾಧ್ಯವಾಗಿದೆ.

ಹೊಸಪೇಟೆ: ದೇಶದಲ್ಲಿ ಸಂವಿಧಾನ ರಚನೆಯಿಂದಾಗಿ ಸಮಾನತೆ ನಿರ್ಮಾಣ ಸಾಧ್ಯವಾಗಿದೆ. ನಾವೆಲ್ಲ ಸಂವಿಧಾನದ ಆಶಯ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ ಕನಸು ನನಸು ಮಾಡಬೇಕಾಗಿದೆ ಎಂದು ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.

ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನದ ಮೂಲ ಆಶಯ ಸಾಮಾಜಿಕ ನ್ಯಾಯವಾಗಿದೆ. ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ನಮ್ಮ ದೇಶ ಪ್ರಜಾತಂತ್ರ, ಗಣತಂತ್ರ ಪ್ರಯೋಗವನ್ನು ಯಶ್ವಸಿಯಾಗಿ ನಡೆಸಿಕೊಂಡು ಬಂದಿದೆ. ಇದಕ್ಕಾಗಿ ಭಾರತದ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಲೇಬೇಕು ಎಂದರು.

ದೇಶದ ಇತಿಹಾಸದಲ್ಲೇ ಜನವರಿ 26 ಅತ್ಯಂತ ಮಹತ್ವದ ದಿನವಾಗಿದ್ದು, ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ಈ ಸಂಭ್ರಮದ ಐತಿಹಾಸಿಕ ದಿನದಂದು ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವ ಎತ್ತಿಹಿಡಿಯಲಾಗಿದೆ ಎಂದರು.

ರಾಜ್ಯ ಸರ್ಕಾರದಿಂದ ಬಡವರಿಗೆ, ಮಹಿಳೆಯರಿಗೆ, ಯುವಕರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈಗಾಗಲೇ ಯಶಸ್ವಿಯಾಗಿ ಯೋಜನೆಗಳು ಅನುಷ್ಠಾನವಾಗುತ್ತಿದ್ದು, ರಾಜ್ಯ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಿ ಎಲ್ಲಾ ಜಿಲ್ಲೆಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡಲಾಗಿದೆ ಎಂದರು.ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಮ್ ಷಾ, ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಎಂ.ಶೃತಿ ಇದ್ದರು.

ಪೊಲೀಸ್ ಇಲಾಖೆ, ಗೃಹಕ ರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಪೌರಕಾರ್ಮಿಕರ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ತಹಸೀಲ್ದಾರ್ ಕಚೇರಿಯ ಭೂಮಿ ಕೇಂದ್ರದ ಅತ್ಯುನ್ನತ ಸೇವೆ ಗುರುತಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಾಸಕ ಗವಿಯಪ್ಪ ಗೈರು:

ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಕಾಂಗ್ರೆಸ್‌ ಶಾಸಕ ಎಚ್‌.ಆರ್‌. ಗವಿಯಪ್ಪ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ಅವರ ನಡುವಿನ ಮುಸುಕಿನ ಗುದ್ದಾಟದಿಂದ ಅವರು ದೂರ ಉಳಿದಿದ್ದಾರೆ ಎಂಬ ಮಾತು ಕೇಳಿ ಬಂದಿತು.

Share this article