ಕಲ್ಯಾಣಿ, ಕೆರೆಗಳ ಸ್ವಚ್ಚತೆಗೆ ಕ್ರಿಯಾ ಯೋಜನೆ ರೂಪಿಸಿ

KannadaprabhaNewsNetwork |  
Published : Aug 16, 2024, 12:59 AM ISTUpdated : Aug 16, 2024, 01:00 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ    | Kannada Prabha

ಸಾರಾಂಶ

ಚಿತ್ರದುರ್ಗ ನಗರ ವ್ಯಾಪ್ತಿಯ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಕಲ್ಯಾಣಿಗಳು, ಕೆರೆಗಳ ಸ್ವಚ್ಛತೆ ಹಾಗೂ ನೀರು ಕಲುಷಿತವಾಗುವುದನ್ನು ತಡೆಗಟ್ಟಲು ಅಗತ್ಯ ಯೋಜನೆ ರೂಪಿಸಿ, ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗ ನಗರ ವ್ಯಾಪ್ತಿಯ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಕಲ್ಯಾಣಿಗಳು, ಕೆರೆಗಳ ಸ್ವಚ್ಛತೆ ಹಾಗೂ ನೀರು ಕಲುಷಿತವಾಗುವುದನ್ನು ತಡೆಗಟ್ಟಲು ಅಗತ್ಯ ಯೋಜನೆ ರೂಪಿಸಿ, ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆರೆ ನೀರು ಕಲುಷಿತವಾಗುತ್ತಿರುವುದರ ಬಗ್ಗೆ ನಾಗರಿಕರಿಂದ ಸಾಕಷ್ಟು ದೂರುಗಳು ಬಂದಿವೆ ಎಂದರು.ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, ನಗರದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನಿಂದ ಸಂಭವಿಸಿದ ಅಹಿತಕರ ಘಟನೆಯನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ನೀರಿನ ಮೂಲಗಳ ಸ್ವಚ್ಛತೆ, ಕೆರೆ, ಕಲ್ಯಾಣಿ, ಹೊಂಡಗಳ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ನಗರ ವ್ಯಾಪ್ತಿಯಲ್ಲಿನ ಸಂತೆಹೊಂಡ, ಮಠದ ಕೆರೆ, ಮಲ್ಲಾಪುರ ಕೆರೆ ಸೇರಿದಂತೆ ವಿವಿಧ ಕಲ್ಯಾಣಿ, ಕೆರೆಗಳು ಹಾಗೂ ಜಿಲ್ಲೆಯಲ್ಲಿನ ಕುಡಿಯುವ ನೀರಿಗಾಗಿ ಬಳಸುವ ಕೆರೆಗಳ ಸ್ವಚ್ಛತೆಗಾಗಿ ಅಗತ್ಯ ಯೋಜನೆ ರೂಪಿಸಬೇಕು. ಇದಕ್ಕಾಗಿ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎಂದು ಸೂಚನೆ ನೀಡಿದರು.

ಕುಂಚಿಗನಾಳ್ ಬಳಿ ನಿರ್ಮಿಸಲಾಗುತ್ತಿರುವ ನೂತನ ಜಿಲ್ಲಾಡಳಿತ ಭವನದ ಕಾಮಗಾರಿ ಭರದಿಂದ ಸಾಗಿದ್ದು, ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಿರಿಯೂರು ಹಾಗೂ ಚಿತ್ರದುರ್ಗ ನಗರದ ಪ್ರಮುಖ ರಸ್ತೆಯನ್ನು ಹಂತ ಹಂತವಾಗಿ ಅಗಲೀಕರಣಗೊಳಿಸುವ ಕುರಿತಂತೆ ಚರ್ಚೆ ನಡೆಸಲಾಯಿತು.

ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಮಾತನಾಡಿ, ಜಿಲ್ಲೆಯಲ್ಲಿ ಚಿತ್ರದುರ್ಗದ ಮಠದ ಕೆರೆ, ಮಲ್ಲಾಪುರ ಕೆರೆ, ಗೋನೂರು ಕೆರೆ, ರಾಣಿ ಕೆರೆ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ. ಸಂಬಂಧಿಸಿದ ಅಧಿಕಾರಿಗಳು ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್ ಮಾತನಾಡಿ, ಚಿತ್ರದುರ್ಗದ ಮಠದ ಕೆರೆ ಅಭಿವೃದ್ಧಿಗಾಗಿ ಈಗಾಗಲೆ ಯೋಜನೆ ರೂಪಿಸಿ, ನೀಲನಕ್ಷೆ ಸಿದ್ಧವಾಗಿರಿಸಿಕೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಎಸ್.ಜೆ ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ