ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭೆ ವ್ಯಾಪ್ತಿಯ ವಸತಿ, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಆಸ್ತಿಗೆ ಪುರಸಭೆ ಇ-ಖಾತಾ ಅಭಿಯಾನ ಆರಂಭಿಸಿದ್ದು, ಪಟ್ಟಣ ವ್ಯಾಪ್ತಿಯ ಆಸ್ತಿ ಮಾಲೀಕರು ನಿಗದಿಪಡಿಸಿದ ಅವಧಿಯೊಳಗೆ ಇ-ಖಾತಾ ಮಾಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮನವಿ ಮಾಡಿದರು.
ಪುರಸಭೆಯ ಬಜೆಟ್ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2025 ಫೆ.11ರಂತೆ ಸ್ಥಳೀಯ ಸಂಸ್ಥೆಗಳಲ್ಲಿ, ಈಗಾಗಲೇ ಆಸ್ತಿ ರಿಜಿಸ್ಟರ್‌ನಲ್ಲಿ ದಾಖಲಿಸಿರುವ ಆಸ್ತಿಗಳಿಗೆ ನಮೂನೆ -3 (ರಿಜಿಸ್ಟರ್ ಎ ) ನಮೂನೆ 3 (ರಿಜಿಸ್ಟರ್ ಬಿ ) ಗಳನ್ನು ಸೃಜಿಸಿ ನೀಡಲು ಸರ್ಕಾರ ಆದೇಶಿಸಿದೆ ಎಂದರು. ಪುರಸಭೆ ಕಚೇರಿಯಲ್ಲಿ ಇ-ಖಾತಾ ಅಭಿಯಾನಕ್ಕೆ ಪ್ರತ್ಯೇಕ ಕೊಠಡಿ ಆರಂಭಿಸಲಾಗಿದ್ದು, ಸ್ವೀಕೃತಿ ಮತ್ತು ರವಾನೆ ಶಾಖೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಪುರಸಭೆ ಕಚೇರಿಗೆ ಸಲ್ಲಿಸಿ ಎಂದರು.ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕ ಸಾಬೀತು ಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರ/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕುಪತ್ರ ಇರಬೇಕು ಎಂದರು. ಪಟ್ಟಣದಲ್ಲಿ ೮೫೭ ಬಿ ಖಾತಾ ಆಗಬೇಕಿದೆ. ಬರುವ ಆಗಸ್ಟ್ ತಿಂಗಳೊಳಗೆ ಎಲ್ಲಾ ಖಾತಾ ಆಗಬೇಕು ಎಂದು ಬಜೆಟ್ ಸಭೆಗೂ ಮುನ್ನ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ಎ ಮತ್ತು ಬಿ ಖಾತಾ ಮಾಡಿಸಿಕೊಳ್ಳಬೇಕಾದ ಆಸ್ತಿ ಮಾಲೀಕರು ತುರ್ತಾಗಿ ದಾಖಲಾತಿ ನೀಡಿ ಖಾತಾ ಮಾಡಿಸಿಕೊಳ್ಳಿ ಎಂದರಲ್ಲದೆ,ಇ ಖಾತಾ ಮಾಡುವುದರಿಂದ ಪುರಸಭೆಗೂ ಆದಾಯ ಬರಲಿದೆ ಎಂದರು. ಪುರಸಭೆ ಅಧ್ಯಕ್ಷ ಮಧು, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಇದ್ದರು.