ಆಂಜನೇಯಗೆ ಎಂಎಲ್‌ಸಿ ಜತೆ ಮಿನಿಸ್ಟರ್ ಮಾಡಿ: ಮಾದಿಗ ಸಮುದಾಯ

KannadaprabhaNewsNetwork |  
Published : Jun 09, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವಂತೆ ಮಾದಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವಂತೆ ಮಾದಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ನರಸಿಂಹರಾಜು, ಆಂಜನೇಯಗೆ ಸೂಕ್ತ ಸ್ಥಾನ ಕಲ್ಪಿಸುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕಳೆದ 45 ವರ್ಷಗಳಿಂದಲೂ ದುಡಿದ ನಿಷ್ಠಾವಂತ ನಾಯಕನಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮಾದಿಗ ಸಮುದಾಯ ಐವತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಂತಹ ಸಮುದಾಯ ಅನಾದಿ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದೆ. ಈಗಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿರುವ ಡಾ.ಜಿ ಪರಮೇಶ್ವರ್ ಸೋತಾಗ ಎಂಎಲ್ಸಿ ಮಾಡಿ ಸಚಿವ ಮಾಡಿರುವ ನಿದರ್ಶನಗಳು ಇವೆ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಲೋಕಸಭೆಯಲ್ಲಿ ಸೋತಾಗ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ. ಆರ್.ಬಿ.ತಿಮ್ಮಾಪುರ ಸೋತಾಗಲೂ ಎಂಎಲ್ಸಿ ಮಾಡಿ ಸಚಿವ ಮಾಡಲಾಗಿದೆ. ಆದ್ದರಿಂದ ಇಡೀ ರಾಜ್ಯದಲ್ಲಿ ಎಚ್.ಆಂಜನೇಯ ಮಾದಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದಾರೆ ಎಂದು ಹೇಳಿದರು.

ಮಧ್ಯ ಕರ್ನಾಟಕ ಭಾಗದಲ್ಲಿ ಮಾದಿಗ ಸಮುದಾಯ ಪ್ರತಿನಿಧಿಸುವ ಮಾಸ್ ಲೀಡರ್ ಆಗಿದ್ದಾರೆ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿಕೊಂಡು ಸಚಿವ ಸ್ಥಾನ ನೀಡಬೇಕು. ಅದೇ ರೀತಿ ಮಾದಿಗ ಸಮುದಾಯದ ಮೂವರಿಗೆ ಮಂತ್ರಿಗಿರಿ ಕೊಡಬೇಕು. ಈ ಕುರಿತು ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಗಮನಕ್ಕೆ ತಂದು ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಿಸಬೇಕು ಎಂದರು.

ಏಳು ಬಾರಿ ಲೋಕಸಭಾ ಸದಸ್ಯರಾಗಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಕೆ.ಎಚ್ ಮುನಿಯಪ್ಪ ಅವರಿಗೆ ಪ್ರಭಾವಿ ಖಾತೆ ಕೊಟ್ಟಿಲ್ಲ. ಬದಲಾಗಿ ಬಲಗೈ ಸಮುದಾಯದ ಪರಮೇಶ್ವರ್ ಸೇರಿದಂತೆ ಖರ್ಗೆ ಪುತ್ರ ಎಂಬ ಕಾರಣಕ್ಕೆ ಪ್ರಭಾವಿ ಖಾತೆ ನೀಡಲಾಗಿದೆ. ಆಂಜನೇಯ ಅವರಿಗೆ ಸೂಕ್ತ ಅಧಿಕಾರ ಕೊಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಸಮರ್ಥರಾಯ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವವರೆಗೂ ಮಾದಿಗರಿಗೆ ರಾಜಕೀಯವಾಗಿ ನ್ಯಾಯ ಸಿಗುವುದಿಲ್ಲ. ಒಳಮೀಸಲಾತಿಯಲ್ಲಿ ಅನ್ಯಾಯ ಆಗಿದ್ದು ಇವರಿಂದಲೇ ಎಂದು ಕಿಡಿಕಾರಿದರು.

ಕಳೆದ 45 ವರ್ಷಗಳಿಂದಲೂ ಪಕ್ಷಕ್ಕಾಗಿ ವಿವಿಧ ಹಂತದ ನಾಯಕರಾಗಿ ವಿದ್ಯಾರ್ಥಿ ಜೀವನದಿಂದಲೂ ಹೋರಾಟ ಮಾಡುತ್ತಾ ಬಂದಿರುವ ಆಂಜನೇಯ ಅವರು ಕಳೆದ ಎರಡು ಚುನಾವಣೆಗಳಲ್ಲಿ ಸೋತಿರುವುದು ನಿಜ. ಆದರೆ, ಕಾಂಗ್ರೆಸ್ ಪಕ್ಷದಲ್ಲೇ ಇರುವ ಕೆಲವು ಮಾದಿಗರಿಂದ ಸೋತಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದು ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೇ ಈವತ್ತು ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿದೆ ಎಂದರು.

ಇಂಗಳದಾಳ್ ರಘು ಮಾತನಾಡಿ, ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ ನೀಡಬೇಕು. ಮಾದಿಗರು ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆಂಜನೇಯ ಅವರ ದ್ವನಿ ಅಡಗಿಸುವ ಕೆಲಸ ಆಗಬಾರದು. ಅಂತಹ ಮಾಸ್ ಲೀಡರ್ ಗೆ ಪಕ್ಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಐನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಾಲಿಕಟ್ಟೆ ತಿಪ್ಪೇಸ್ವಾಮಿ, ಯುವ ಮುಖಂಡ ರಮೇಶ್ ಕೋಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ
2028ಕ್ಕೆ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ: ಸೀಕಲ್