ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಅರಣ್ಯಗಳು ತುಂಬಾ ಮಹತ್ತರ ಸ್ಥಾನ ವಹಿಸುತ್ತವೆ. ಇತ್ತೀಚಿಗೆ ಅರಣ್ಯಗಳು ವಿನಾಶದ ಸ್ಥಿತಿಗೆ ತಲುಪುತ್ತಿವೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಅರಣ್ಯದ ಮಹತ್ವವನ್ನು ಮನವರಿಕೆ ಮಾಡಿಸಿದಲ್ಲಿ ಅರಣ್ಯಗಳನ್ನು ಕಾಪಾಡಬಹುದಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಶೇಖರ್ ತಿಳಿಸಿದರು.ಗುಡಿಬಂಡೆ ವಲಯ ಅರಣ್ಯ ಇಲಾಖೆ ವತಿಯಿಂದ ತಾಲೂಕು ಬೀಚಗಾನಹಳ್ಳಿ ಕ್ರಾಸ್ ಬಳಿಯ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನ ಎಂಬ ಕಾರ್ಯಕ್ರಮದಡಿ ಬನ್ನೇರುಘಟ್ಟ ಪ್ರವಾಸ ಹಮ್ಮಿಕೊಂಡಿದ್ದು, ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ಮಕ್ಕಳಿಗೆ ವನದರ್ಶನಪ್ರಕೃತಿಯ ಅಸಮತೋಲನದಿಂದಾಗಿ ಏನೆಲ್ಲಾ ಅನಾಹುತಗಳು ನಡೆಯುತ್ತಿವೆ ಎಂಬುದನ್ನು ನಾವೆಲ್ಲ ನೋಡುತ್ತಿದ್ದೇವೆ. ಒಂದು ಕಡೆ ಅತಿವೃಷ್ಟಿಯಾದರೇ, ಮತ್ತೊಂದು ಕಡೆ ಅನಾವೃಷ್ಟಿಯಾಗುತ್ತಿದೆ. ಇದರಿಂದಾಗಿ ಜೀವಸಂಕುಲ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನದರ್ಶನ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎಂದರು.
ಈ ಕಾರ್ಯಕ್ರಮದಡಿ ಕೈಗೊಂಡ ಪ್ರವಾಸದಲ್ಲಿ ಅರಣ್ಯ ಸಂರಕ್ಷಣೆ, ಅರಣ್ಯಗಳ ಮಹತ್ವ, ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಈ ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಇದೊಂದು ಮನರಂಜನೆ ಎಂಬಂತೆ ಕಾಣದೇ, ಮಾಹಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಜನರಿಗೆ ಅರಿವು ಮೂಡಿಸಬೇಕು
ಮಕ್ಕಳು ಇಲ್ಲಿ ಪಡೆದ ಅನುಭವವನ್ನು ಪೋಷಕರಿಗೆ, ಗ್ರಾಮಸ್ಥರಿಗೆ ತಿಳಿಸುವ ಮೂಲಕ ಅರಣ್ಯದ ಮಹತ್ವ, ವನ್ಯ ಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾವುಗಳು ಪರಿಸರವನ್ನು ಸಂರಕ್ಷಣೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಬನ್ನೇರುಘಟ್ಟ ಅರಣ್ಯಕ್ಕೆ ಪ್ರವಾಸ
ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಚಿಣ್ಣರ ವನದರ್ಶನ ಕಾರ್ಯಕ್ರಮದಡಿ ಆದರ್ಶ ಶಾಲೆಯ 48 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರನ್ನು ಬನ್ನೇರುಘಟ್ಟ ವನ್ಯ ಪ್ರದೇಶದಕ್ಕೆ 2 ದಿನಗಳ ಕಾಲ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗಿತ್ತು. ಈ ಸಮಯದಲ್ಲಿ ಅರಣ್ಯ ಇಲಾಖೆಯ ಕನಕರಾಜು, ಆದರ್ಶ ಶಾಲೆಯ ಶಿಕ್ಷಕರಾದ ಡಾ.ವಿಜಯ್ ಕುಮಾರ್, ದೇವೀಂದ್ರ ಯಳಾವರ್, ಮಹೇಶ್, ಸುಬ್ಬನಾರಾಯಣ ಸೇರಿದಂತೆ ಹಲವರು ಇದ್ದರು.