ಸೊರಬ: ಮಕಳನ್ನು ಹೆತ್ತು ದೊಡ್ಡವರಾನ್ನಾಗಿ ಮಾಡಿ ಅವರ ಸುಖಕ್ಕಾಗಿ ಆಸ್ತಿಯನ್ನು ಮಾಡಿಟ್ಟು ಮುಂದೆ ಕಷ್ಟ ಕಾಲದಲ್ಲಿ ಅವರ ದುಃಖವನ್ನು ನೋಡುವುದಕ್ಕಿಂತಲೂ ಅವರನ್ನು ಆಧ್ಯಾತ್ಮದ ನೆಲೆಯಲ್ಲಿ ಬೆಳೆಸಿ ಅವರನ್ನು ನಿಮ್ಮ ಆಧ್ಯಾತ್ಮಕ್ಕೆ ವಾರಸೂದಾರಾರನ್ನಾಗಿಸಿ ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಚಿಕ್ಕಬ್ಬುರು, ಗುಡುಗಿನ ಕೊಪ್ಪ, ಹೊಸ ಗುಡುಗಿನಕೊಪ್ಪ ಹಾಗೂ ಕಾನುಕೊಪ್ಪ ಗ್ರಾಮಗಳ ವ್ಯಾಪ್ತಿಯ ಗೌರಿಹಳ್ಳದಲ್ಲಿ ಮಕರ ಸಂಕ್ರಾಂತಿಯ ಪುಣ್ಯ ಕಾಲದಲ್ಲಿ ಆಯೋಜಿಸಿದ್ದ ಗೌರಿಶಂಕರ ಪೂಜಾ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಮಕ್ಕಳು ನಿಮ್ಮ ಪರಿವರ್ತನ ವಂಶವಾಹಿಗಳು. ಅವುಗಳನ್ನು ಯೋಗ್ಯ ರೀತಿಯಲ್ಲಿ ಬೆಳೆಸಬೇಕು. ನೀವೂ ಏನು ಆಗಲು ಬಯಸಿದ್ದಿರೋ ಆದು ಆಗಲಿಲ್ಲವೋ ಅದನ್ನು ಮಕ್ಕಳ ಮೂಲಕ ಸಾಧಿಸಲು ಮಕ್ಕಳನ್ನು ಅನುವುಗೊಳಿಸಬೇಕು. ಎಲ್ಲರೂ ಸುಖಬೇಕೆಂದು ಸಂಸಾರಿಗಲಾಗುತ್ತಾರೆ. ಆದರೆ ಅದೆಷ್ಟು ಜನ ಸುಖವಾಗಿದ್ದರೋ ಯಾರಿಗೆ ಗೊತ್ತು. ಹೆಂಡತಿ, ಮಕ್ಕಳು, ಗಂಡ, ಬಂಧು ಬಳಗ, ಗುರು, ಶಿಷ್ಯರಿಂದ ಸುಖವಿದೆ. ಆಧ್ಯಾತ್ಮ ಇದಕ್ಕೆಲ್ಲಾ ಉತ್ತರ ನೀಡುತ್ತದೆ. ನೀವು ಯಾವುದನ್ನು ಚಿಂತಿಸುತ್ತಿರೋ ಅದು ಆಗುತ್ತೀರಿ. ನಿಮ್ಮ ಚಿಂತನೆ ನಿಮ್ಮನ್ನು ನೀವು ಚಿಂತಿಸಿದ ರೀತಿ ಮಾಡುತ್ತದೆ. ಆದ್ದರಿಂದ ನಿಮ್ಮ ಚಿಂತನೆ, ವಿಚಾರ ಯೋಗ್ಯವಾಗಿರಲಿ ಎಂದರು.
ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಘೋಡಗೇರಿ ಪ್ರಭುಲಿಂಗ ಸ್ವಾಮೀಜಿ, ಹಿರೇಮಾಗಡಿ ಶಿವಯೋಗಿ ದೇವರು, ಗಂಗಾಧರದೇವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಶರಣರಾದ ಲಿಂಗಪ್ಪ ಶರಣರು ಉಪಸ್ಥಿತರಿದ್ದರು. ವೇ.ಪುಟ್ಟಯ್ಯ ಶಾಸ್ತ್ರಿಗಳಿಂದ ಸ್ವಾಮಿಗೆ ಅಭಿಷೇಕಾದಿ ಪೂಜೆ ನೆರವೇರಿತು.ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿಯ ಪದಾಧಿಕಾರಿಗಳು, ಚಿಕ್ಕಬ್ಬುರು, ಗುಡುಗಿನಕೊಪ್ಪ, ಹೊಸಗುಡುಗಿನಕೊಪ್ಪ, ಕಾನುಕೊಪ್ಪ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ರಾತ್ರಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.