ಉದ್ಯೋಗ ಖಾತ್ರಿ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಿ: ರಮೇಶ ಸುಲ್ಪಿ ಕರೆ

KannadaprabhaNewsNetwork | Updated : May 22 2024, 12:47 AM IST

ಸಾರಾಂಶ

ಇದ್ದ ಊರಲ್ಲೇ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಖಾತ್ರಿ ಇದ್ದು, ಬೇಸಿಗೆ ಮುಗಿಯುವವರೆಗೂ ನಿಮ್ಮ ಕೂಲಿ ಪೂರ್ಣಗೊಳಿಸಬೇಕು

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಗ್ರಾಮದಿಂದ ಯಾರೂ ವಲಸೆ ಹೋಗದೆ ಪ್ರತಿಯೊಬ್ಬರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ತಾಪಂ ಅಧಿಕಾರಿ ರಮೇಶ ಸುಲ್ಪಿ ಕರೆ ನೀಡಿದರು.

ತಾಲೂಕಿನ ಗುಂಡೂರ ಗ್ರಾಪಂ ವ್ಯಾಪ್ತಿಯ ಇಲ್ಲಾಳ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದಲ್ಲಿ ಮಾತನಾಡಿ, ಬೇಸಿಗೆ ಕಾಲದಲ್ಲಿ ಉದ್ಯೋಗ ಆರಿಸಿಕೊಂಡು ಯಾರು ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ವಲಸೆ ಹೋಗಬಾರದು. ಇದ್ದ ಊರಲ್ಲೇ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಖಾತ್ರಿ ಇದ್ದು, ಬೇಸಿಗೆ ಮುಗಿಯುವವರೆಗೂ ನಿಮ್ಮ ಕೂಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಡವರ ಪರವಾಗಿ ಇರುವ ಯೋಜನೆ ಇದಾಗಿದೆ. ಆದ್ದರಿಂದ ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುವುದರ ಜೊತೆಗೆ, ನಿಮ್ಮ ಮನೆಯ ಪಕ್ಕದ ಜನರಿಗೂ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಇನ್ನೂ ಹೆಚ್ಚಿನ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳುವಂತೆ ಮಾಡಬೇಕು ಎಂದರು.

ತಾಪಂ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್‌ ಮಾತನಾಡಿ, ಬೇಸಿಗೆ ಮುಗಿಯುವವರೆಗೂ ನಿರಂತರವಾಗಿ ಉದ್ಯೋಗ ಕೆಲಸ ಕೊಡುತ್ತೇವೆ, ಇದರ ಬಗ್ಗೆ ಯಾವುದೇ ಅನುಮಾನ ಬೇಡ. ನೀಡಿದ ಕೆಲಸವನ್ನು ಚನ್ನಾಗಿ ಅಚ್ಚುಕಟ್ಟಾಗಿ ಮಾಡಬೇಕು ಮತ್ತು ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಸಾಕು. ನಾವು ಬಗೆಹರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ನಿರಂಜನಪ್ಪ ಬಿರಾದಾರ್‌, ಉಪಾಧ್ಯಕ್ಷ ಪಾರ್ವತಿ ರಾಜಕುಮಾರ, ಪಿಡಿಒ ಪ್ರೀಯದರ್ಶಿನಿ, ಮಹಾದೇವ ಬೆಳಮಗಿ, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎಗಳಾದ ಮಲ್ಲಕಾರ್ಜುನ ಜಾಧವ, ಶ್ರೀಕಾಂತ ಪಾಟೀಲ್‌, ಕಾಯಕ ಮಿತ್ರ ಅಮ್ರಪಾಲಿ ಸೇರಿದಂತೆ ಲ್ಕೂ ನೂರಾರು ಕಾರ್ಮಿಕರು ಇದ್ದರು.

Share this article