ಕನ್ನಡಪ್ರಭ ವಾರ್ತೆ ಕಮಲನಗರ
ತಾಲೂಕಿನ ಮದನೂರ ಗ್ರಾಮ ಪಂಚಾಯಿತಿಯಲ್ಲಿ 2026-27ನೇ ಸಾಲಿನ ನರೇಗಾ ಯೋಜನೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನೆ ಕುರಿತು ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿ, ತೆರೆದ ಬಾವಿ, ಕುರಿ, ಕೋಳಿ ಮತ್ತು ಹಂದಿ ಸಾಕಾಣಿಕೆ ಶೆಡ್ಗಳು, ದನದ ಕೊಟ್ಟಿಗೆ ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಲು ಅವಕಾಶವಿದೆ. ಗ್ರಾಮಸ್ಥರು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಉದ್ಯೋಗ ಚೀಟಿ ಪಡೆದುಕೊಳ್ಳಬೇಕು. ಸಮುದಾಯ ಕಾಮಗಾರಿಗಳಲ್ಲಿಯೂ ಭಾಗವಹಿಸಿ ಸ್ಥಳೀಯವಾಗಿ ಉದ್ಯೋಗ ಪಡೆಯಬೇಕು ಎಂದು ತಿಳಿಸಿದರು.
ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್-ಗ್ರಾಮೀಣ (ವಿಬಿ-ಜಿ ರಾಮ್ ಜಿ) ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಕೂಲಿ ಕೆಲಸ ಹಾಗೂ ಮಹಿಳೆಯರು ಮತ್ತು ಪುರುಷರಿಗೆ ದಿನಕ್ಕೆ 382 ರು. ಸಮಾನ ಕೂಲಿ ದೊರೆಯುವ ಕುರಿತು ಮಾಹಿತಿ ನೀಡಿದರು. ಗ್ರಾಮದಲ್ಲಿ ಕೈಗೊಂಡ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ವರದಿಯನ್ನು ಮಂಡಿಸಿದರು.ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ. ಸುರೇಶ್ ದಿನಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯರು, ದತ್ತಾಂಶ ನಮೂದು ನಿರ್ವಾಹಕ ಮಹೇಶ, ಬಿಲ್ ಕಲೆಕ್ಟರ್ ರಾಹುಲ್, ಪಂಚಾಯಿತಿ ಸಿಬ್ಬಂದಿ, ಕೂಲಿಕಾರರು, ಗ್ರಾಮಸ್ಥರು ಹಾಗೂ ಸಾಮಾಜಿಕ ಪರಿಶೋಧನಾ ತಂಡದ ಸದಸ್ಯರು ಉಪಸ್ಥಿತರಿದ್ದರು.