‘ನಿರುದ್ಯೋಗ ಭತ್ಯೆ’ ಸದುಪಯೋಗ ಪಡಿಸಿಕೊಳ್ಳಿ: ಶೇಖ್ ತನ್ವೀರ್ ಆಸಿಫ್

KannadaprabhaNewsNetwork | Published : Dec 27, 2023 1:30 AM

ಸಾರಾಂಶ

ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಚಾಲನೆ ನೀಡಿದ್ದು, ಅರ್ಹರು ಬಂದ ವಂತಿಕೆಯನ್ನು ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ, ಪುಸ್ತಕ ಖರೀದಿಗೆ ಬಳಸಿಕೊಳ್ಳಿ. ಉತ್ತಮ ಹುದ್ದೆ ಪಡೆಯಲು ಈ ಯೋಜನೆ ಸಹಕಾರಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಯುವನಿಧಿ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿಪ್ಲೋಮಾ ಅಥವಾ ಪದವಿ ಮುಗಿದ ನಂತರ ತಕ್ಷಣ ಉದ್ಯೋಗ ಸಿಗುವುದು ಕಷ್ಟಕರವಾಗಿರುತ್ತದೆ. ಯುವ ನಿಧಿ ದೊರಕುವ ನಿರುದ್ಯೋಗ ಭತ್ಯೆಯನ್ನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಕೌಶಲ್ಯ ತರಬೇತಿ ಪಡೆಯಲು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಲು ಪುಸ್ತಕ ಖರೀದಿಗಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.

೨೦೨೨-೨೩ನೇ ಶೈಕ್ಷಣಿಕ ಸಾಲಿನ ೨೦೨೩ರಲ್ಲಿ ಪದವಿ ಅಥವಾ ಡಿಪ್ರೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇವರಲ್ಲಿ ಪದವಿ, ಡಿಪ್ಲೋಮಾ ನಂತರ ಕನಿಷ್ಠ ೬ ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದಿರುವವರು ರಾಜ್ಯದಲ್ಲಿ ವಾಸವಿರುವ (ಕನಿಷ್ಠ ೬ ವರ್ಷದೊಳಗೆ ಪದವಿ, ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು) ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂದರು.

ಜಿಲ್ಲೆಯಲ್ಲಿರುವ ವಿವಿಧ ಕಾಲೇಜಿನ ಪ್ರಾಂಶುಪಾಲರು ತಮ್ಮಲ್ಲಿ ವಿದ್ಯಾರ್ಥಿಗಳ ಮಾಹಿತಿ ಲಭ್ಯವಿದೆ. ಎಲ್ಲರಿಗೂ ಯುವನಿಧಿ ಯೋಜನೆಯ ಮಾಹಿತಿ ನೀಡಿ ನೋಂದಾಯಿಸಲು ಸಹಕರಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅರ್ಹರು ಉಚಿತವಾಗಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ ೧೮೦೦-೫೯೯-೯೯೧೮ನ್ನು ಸಂಪರ್ಕಿಸಬಹುದು ಎಂದರು.

ಜಿಲ್ಲೆಯಲ್ಲಿ ನೋಂದಾಯಿಸಿಕೊಳ್ಳಲು ಅರ್ಹತೆ ಹೊಂದಿರುವವರು ೧೦ ಸಾವಿರದಿಂದ ೧೨ ಸಾವಿರ ಅಭ್ಯರ್ಥಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಕಾಲೇಜು ಅಥವಾ ಗ್ರಾಮಗಳಲ್ಲಿ ನೋಂದಾಯಿಸಿಕೊಳ್ಳಲು ಅಭ್ಯರ್ಥಿಗಳನ್ನು ಗುರುತಿಸಿ ಒಟ್ಟುಗೂಡಿಸಿದರೆ ನೊಂದಣಿಗೆ ಶಿಬಿರ ಆಯೋಜಿಸಲಾಗುವುದು ಎಂದರು.

ಬೇಕಿರುವ ದಾಖಲೆಗಳು:

ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿ, ಪದವಿ, ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ, ಡಿಪ್ಲೋಮೊ ಪ್ರಮಾಣ ಪತ್ರ (ಪಿಡಿಸಿ), ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ, ೨೦೧೭ಕ್ಕೂ ಹಿಂದಿನ ಪಡಿತರ ಚೀಟಿ, (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ನೀಡಿದ ಎಸ್‌ಎಸ್‌ಎಲ್ಸಿ ಅಂಕಪಟ್ಟಿ, ಒಂದು ವೇಳೆ ಎಸ್ಸೆಸ್ಸೆಲ್ಸಿ ನಂತರ ನೇರವಾಗಿ ಡಿಪ್ಲೋಮೊಗೆ ಸೇರ್ಪಡೆಗೊಂಡು ತೇರ್ಗಡೆಯಾಗಿದ್ದರೆ, ಅಂತಹ ವಿದ್ಯಾರ್ಥಿಗಳು ೭,೮,೯ ಮತ್ತು ೧೦ನೇ ತರಗತಿ ಅಂಕಪಟ್ಟಿ ಅವಶ್ಯವಿರುತ್ತದೆ ಎಂದರು.

ಜಿಪಂ ಉಪಕಾರ್ಯದರ್ಶಿ ಬಾಬು, ಯೋಜನಾ ನಿರ್ದೇಶಕ ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಧನುಷ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಆರ್.ನಾಗಾನಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಉಪಸ್ಥಿತರಿದ್ದರು.

Share this article