ಕನ್ನಡಪ್ರಭ ವಾರ್ತೆ ತುಮಕೂರು
ನಗರದ 26 ನೇ ವಾರ್ಡಿನ ದೋಬಿ ಘಾಟ್ ಬಳಿ ಆಯುಷ್ಮಾನ್ ಆರೋಗ್ಯ ಕೇಂದ್ರ ಹಾಗೂ ನಗರ ಕೇಂದ್ರ ಗ್ರಂಥಾಲಯ ಶಾಖೆಯ ಸೇವೆ ಆರಂಭವಾಯಿತು.ಆಯುಷ್ಮಾನ್ ಆರೋಗ್ಯ ಕೇಂದ್ರ ಹಾಗೂ ಗ್ರಂಥಾಲಯ ಶಾಖೆ ಉದ್ಘಾಟಿಸಿ ಮಾತನಾಡಿದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಇಂದು ಆರೋಗ್ಯ ಸೇವೆ ದುಬಾರಿಯಾಗುತ್ತಿದೆ. ಜೀವಮಾನ ದುಡಿದ ಹಣ ಆರೋಗ್ಯ ಕಾಪಾಡಿಕೊಳ್ಳಲು ಸಾಕಾಗುತ್ತಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆರೋಗ್ಯ ಸೇವೆ ಪಡೆಯಲು ಹೆದರುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಎಲ್ಲರಿಗೂ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ದೊರೆಯಲು ಸರ್ಕಾರ ಸಾರ್ವಜನಿಕ ಆಸ್ಪತ್ರೆ, ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡುತ್ತಿದೆ. ಇಲ್ಲಿ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯ ಒದಗಿಸಲು ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು.
ಈಗ ಜನರಲ್ಲಿ ಓದುವ ಪ್ರವೃತ್ತಿ ಕಮ್ಮಿಯಾಗಿದೆ. ಮೊಬೈಲ್ ವ್ಯಾಮೋಹ ಕೈಬಿಟ್ಟು ಪುಸ್ತಕ ಹಿಡಿದು ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಜ್ಞಾನ ನೀಡುವ ಪುಸ್ತಕಗಳು ಉತ್ತಮ ಬದುಕನ್ನು ರೂಪಿಸಲು, ಶ್ರೇಷ್ಠ ವ್ಯಕ್ತಿತ್ವ ಬೆಳೆಸಲು ನೆರವಾಗುತ್ತವೆ. ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡು ಜ್ಞಾನ ಪಡೆದುಕೊಳ್ಳುವಂತೆ ಸ್ವಾಮೀಜಿ ಹೇಳಿದರು.ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, 26 ನೇ ವಾರ್ಡಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇಲ್ಲಿನ ನಾಗರಿಕರು ಜಾಗೃತರಾಗಿ ಅಗತ್ಯ ಸಾರ್ವಜನಿಕ ಕೆಲಸಕಾರ್ಯಗಳು ನಡೆಯಲು ಸಹಕಾರ ನೀಡಿದ್ದಾರೆ. ಈಗ ಆರಂಭವಾಗಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಹಾಗೂ ಗ್ರಂಥಾಲಯದ ಸೌಲಭ್ಯವನ್ನು ನಾಗರಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
26 ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಎಚ್. ಮಲ್ಲಿಕಾರ್ಜುನಯ್ಯ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ವಾರ್ಡಿನಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ತಮಗಿದೆ. ಇಷ್ಟೆಲ್ಲಾ ಕೆಲಸಕಾರ್ಯಗಳಾಗಲು ವಾರ್ಡಿನ ಹಿರಿಯ ನಾಗರಿಕರು, ನಾಗರಿಕ ಸಮಿತಿಗಳ ಮುಖಂಡರು ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಶಾಸಕರು ಸ್ಪಂದಿಸಿ ನೆರವಾಗಿದ್ದಾರೆ. ಈ ಎಲ್ಲದರ ಶ್ರೇಯ ಶಾಸಕರಿಗೆ ಹಾಗೂ ಇಲ್ಲಿನ ನಾಗರಿಕರಿಗೆ ಸಲ್ಲಬೇಕು ಎಂದು ಹೇಳಿದರು.ಇಲ್ಲಿ ಆಸ್ಪತ್ರೆ ಹಾಗೂ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಎರಡೂ ಆಗಿವೆ. ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ನಿವೃತ್ತ ಶಿಕ್ಷಕ ಡಿ. ದೊಡ್ಡಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ವಿಜಯ ಕಾಲೇಜಿನ ಕಾರ್ಯದರ್ಶಿ ಫಣೀಶ್ ಅವರು ಪೀಠೋಪಕರಣ ದಾನ ನೀಡಿ ನೆರವಾಗಿದ್ದಾರೆ ಎಂದು ಅವರ ಸೇವೆ ಶ್ಲಾಘಿಸಿದರು.
ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಹಾಗೂ ಈ ಭಾಗದ ನಾಗರಿಕ ಸಮಿತಿಗಳ ಮುಖಂಡರು ಭಾಗವಹಿಸಿದ್ದರು.ಈ ವೇಳೆ ಗ್ರಂಥಾಲಯದ ದಾನಿಗಳಾದ ಡಿ. ದೊಡ್ಡಯ್ಯ, ಫಣೀಶ್, ನಾಗರಿಕ ಸಮಿತಿಗಳ ಅಧ್ಯಕ್ಷರು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.