ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದಲ್ಲಿ ಕೆಲ ಅಂಗಡಿಗಳಲ್ಲಿ ಹಾಕಲಾಗಿರುವ ನಾಮಫಲಕಗಳಲ್ಲಿ ಶೇ. ೬೦ರಷ್ಟು ಕನ್ನಡ ಬಳಸಬೇಕು ಎಂಬ ನಿಯಮವಿದ್ದರೂ ಪಾಲನೆಯಾಗಿಲ್ಲ, ನಾಮಫಲಕಗಳು ಆಂಗ್ಲ ಭಾಷೆಯಲ್ಲಿ ಕೂಡಿವೆ. ಇಂತಹ ಅಂಗಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕವು ಪುರಸಭೆಗೆ ಮನವಿ ಸಲ್ಲಿಸಿತ್ತು.ವಹಿವಾಟು ನಡೆಸುತ್ತಿರುವ ವರ್ತಕರು ತಮ್ಮ ಅಂಗಡಿಗಳ ನಾಮಫಲಕಗಳಲ್ಲಿ ಶೇ. ೬೦ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬುದಾಗಿ ಕರ್ನಾಟಕ ಸರ್ಕಾರವು ಕಳೆದ ವರ್ಷದ ಜನವರಿ ೫ರಂದು ಅಧಿಸೂಚನೆ ಹೊರಡಿಸಿದೆ. ಇದು ಪಾಲನೆಯಾಗುತ್ತಿಲ್ಲ, ಅಧಿಸೂಚನೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ನಾಮಫಲಕಗಳಲ್ಲಿ ಶೇ.೬೦ರಷ್ಟು ಕನ್ನಡ ಬಳಕೆ, ಮಿಕ್ಕ ಶೇ. ೪೦ರಷ್ಟು ಅಂಗ್ಲ ಭಾಷೆ ಸೇರಿ ಇನ್ನಿತರ ಭಾಷೆಗಳನ್ನು ಬಳಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿಯಮವನ್ನು ಯಾವ ಅಂಗಡಿಯವರು ಪಾಲಿಸುತ್ತಿಲ್ಲ, ಇಂತಹ ಅಂಗಡಿಗಳಿಗೆ ನೋಟಿಸ್ ಕೊಡುವ ಮೂಲಕ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರದಂದು ಪುರಸಭಾ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಧು ಕರಡೇವು ಮಾತನಾಡಿ, ನಿಯಮ ಪಾಲನೆಯಾಗದ ಕುರಿತಾಗಿ ಪುರಸಭೆಗೆ ಮನವಿ ನೀಡಲಾಗಿದೆ. ಹಲವಾರು ಅಂಗಡಿಗಳು ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳದೇ ಆಂಗ್ಲ ಅಥವಾ ಇತರೆ ಭಾಷೆಗಳಲ್ಲಿ ನಾಮಪಲಕಗಳನ್ನ ಪ್ರದರ್ಶಿಸುತ್ತಿವೆ. ಇದರಿಂದ ರಾಜ್ಯ ಭಾಷೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಹಾಗೂ ಸಾರ್ವಜನಿಕವಾಗಿ ಕೆಲವೊಂದು ಹೋಲ್ಡಿಂಗ್‌ಗಳಲ್ಲಿ ಶೇ. ೬೦ರಷ್ಟು ಕನ್ನಡ ಬಳಕೆ ಆಗಿರುವುದಿಲ್ಲ, ಈ ಬಗೆ ನೋಟಿಸ್ ನೀಡಿ ಸರಿಪಡಿಸುವುದು ಇದಾಗದಿದ್ದಲ್ಲಿ ನಿಯಮಕ್ಕೆ ವಿರುದ್ಧವಾಗಿರುವ ಅಂಗಡಿಗಳ ಪರವಾನಿಗೆಗಳನ್ನು ರದ್ದುಪಡಿಸಬೇಕೆಂದು ಪುರಸಭೆಯನ್ನು ಆಗ್ರಹಿಸಲಾಗಿದೆ. ಆದಾಗ್ಯೂ ಬೋರ್ಡ್‌ಗಳಲ್ಲಿ ಬದಲಾವಣೆ ಕಾಣದಿದ್ದಲ್ಲಿ ಅಂತಹ ಬೋರ್ಡ್‌ಗಳಿಗೆ ಮಸಿ ಬಳಿಯುವ ಅಥವಾ ಕಿತ್ತು ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದರು.ಈ ವೇಳೆ ತಾಲೂಕು ಅಧ್ಯಕ್ಷ ಮಧು ಕರಡೇವು, ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಕರಡೇವು, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಗಣೇಶ್‌ಗೌಡ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಧರ್ಮರಾಜ್, ತಾಲೂಕು ಯುವ ಘಟಕದ ಅಧ್ಯಕ್ಷ ಎಸ್.ಎಂ.ಹರೀಶ್, ಆಟೋ ಘಟಕದ ಅಧ್ಯಕ್ಷ ನವೀನ್ ಆರ್ಯ, ವೆಂಕಟೇಶ್, ಆನಂದ್ ಸೇರಿ ಇತರರು ಇದ್ದರು.