ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಳ್ಳಿ: ಕೆ.ಎಸ್.ವಿಜಯ್‌ಆನಂದ್

KannadaprabhaNewsNetwork |  
Published : Nov 15, 2026, 01:30 AM IST
೧೪ಕೆಎಂಎನ್‌ಡಿ-೧ಮಂಡ್ಯದ ಪಿಇಎಸ್ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಿಗರು ಮೊದಲು ಭಾಷಾಭಿಮಾನಿಗಳಾಗಬೇಕು. ಮಕ್ಕಳಿಗೆ ಕನ್ನಡವನ್ನು ಕಲಿಸುವ, ಭಾಷೆಯ ಮೇಲೆ ಪ್ರೀತಿ ಹುಟ್ಟುವಂತೆ ಮಾಡಬೇಕು. ಕನ್ನಡದಲ್ಲಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ಆಗ ಕನ್ನಡದ ಬೆಳವಣಿಗೆ ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜ್ಞಾನಾರ್ಜನೆಗಾಗಿ ಎಷ್ಟು ಭಾಷೆಯನ್ನೂ ಕಲಿತರೂ ತಪ್ಪಿಲ್ಲ. ಪರಭಾಷೆಗಳನ್ನು ಕಲಿಯುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಮಾತೃಭಾಷೆಯಾದ ಕನ್ನಡವನ್ನು ಎಂದಿಗೂ ಮರೆಯಬಾರದು. ಹೃದಯದ ಭಾಷೆಯಾಗಿ ಪ್ರೀತಿಸಿ, ಗೌರವಿಸಿ, ಬೆಳೆಸುವಂತೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಹೇಳಿದರು.

ನಗರದಲ್ಲಿರುವ ಪಿಇಎಸ್ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಸುಂದರ ಲಿಪಿ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಕನ್ನಡ ಭಾಷೆಯಲ್ಲಿ ದೊಡ್ಡ ಭಂಡಾರವೇ ಅಡಗಿದ್ದರೂ ಅದನ್ನು ಅರ್ಥೈಸಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದು ಬೇಸರದಿಂದ ನುಡಿದರು.

ಕನ್ನಡಿಗರು ಮೊದಲು ಭಾಷಾಭಿಮಾನಿಗಳಾಗಬೇಕು. ಮಕ್ಕಳಿಗೆ ಕನ್ನಡವನ್ನು ಕಲಿಸುವ, ಭಾಷೆಯ ಮೇಲೆ ಪ್ರೀತಿ ಹುಟ್ಟುವಂತೆ ಮಾಡಬೇಕು. ಕನ್ನಡದಲ್ಲಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ಆಗ ಕನ್ನಡದ ಬೆಳವಣಿಗೆ ಸಾಧ್ಯವಾಗಲಿದೆ. ಮಕ್ಕಳಲ್ಲಿ ಕನ್ನಡ ಸಾಹಿತ್ಯ, ಕತೆ-ಕಾದಂಬರಿ ಓದುವ ಹವ್ಯಾಸವನ್ನು ರೂಢಿಸಿಕೊಟ್ಟಾಗ ನಮ್ಮ ಸಾಹಿತ್ಯ ಪರಂಪರೆಯ ಶ್ರೇಷ್ಠತೆ ಅರಿವಾಗುತ್ತದೆ ಎಂದು ನುಡಿದರು.

ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯಾಗಿಸಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುವಂತೆ ಮಾಡಬೇಕು. ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲೂ ಕನ್ನಡ ಭಾಷೆಯಲ್ಲಿ ಕಲಿಯುವಂತಹ ವಾತಾವರಣ ನಿರ್ಮಾಣಗೊಂಡಾಗ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಬೆಳವಣಿಗೆ ಕಾಣುವುದಕ್ಕೆ ಸಾಧ್ಯವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ವಾಗ್ಮಿ, ಹರಿಕಥೆ ವಿದ್ವಾನ್ ಉಮೇಶ್ ಶಿವಾರ ಮತ್ತು ತಂಡದಿಂದ ಕನ್ನಡ ಗೀತೆಗಳು, ಹಾಸ್ಯ, ನೀತಿಕಥೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಸ್ಯ ಸಂದೇಶಕ್ಕೆ ವಿದ್ಯಾರ್ಥಿಗಳು ಮನಸೂರೆಗೊಂಡರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ನೀಲಕಂಠ, ಉಪಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ಎಸ್.ನಂದೀಶ್‌ಕುಮಾರ್, ಉಪನ್ಯಾಸಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಅಭಿವೃದ್ಧಿಗೆ ಯುವಶಕ್ತಿ ಆಧಾರಸ್ತಂಭ: ಕಾಳೇಗೌಡ
ಶಾಸಕ ಪೊನ್ನಣ್ಣ, ಅಶೋಕ್ ಪೂವಯ್ಯಗೆ ಸನ್ಮಾನ