ಆರ್‌ಎಸ್‌ಎಸ್‌ಗೆ ಕಾನೂನುಬದ್ಧ ನೋಂದಣಿ ಕಡ್ಡಾಯಗೊಳಿಸಿ

KannadaprabhaNewsNetwork |  
Published : Jul 04, 2026, 01:45 AM IST
03 HRR. 01ಹರಿಹರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಣಿ ಮಾಡಲು ಆಗ್ರಹಿಸಿ ಕದಸಂಸ ಕಾರ್ಯಕರ್ತರು ಶುಕ್ರವಾರ ಹರಿಹರದ ತಹಶೀಲ್ದಾರ್ ಗ್ರೇಡ್-2 ಪುಷ್ಪ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ಸಂವಿಧಾನಬದ್ಧ ಹಾಗೂ ಕಾನೂನುಬದ್ಧ ಆಡಳಿತಾತ್ಮಕ ಚೌಕಟ್ಟಿನೊಳಗೆ ತಂದು, ಅದರ ಕಾರ್ಯ ಚಟುವಟಿಕೆಗಳಲ್ಲಿ ಸಾರ್ವಜನಿಕ ಉತ್ತರದಾಯಿತ್ವ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಖಚಿತಪಡಿಸುವಂತೆ ಆಗ್ರಹಿಸಿ ಇಲ್ಲಿನ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯಮಂತ್ರಿ, ಗೃಹ ಸಚಿವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ) ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

- ಹರಿಹರದಲ್ಲಿ ದಲಿತ ಸಂಘರ್ಷ ಸಮಿತಿ ಒತ್ತಾಯ । ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ

- - -

ಕನ್ನಡಪ್ರಭ ವಾರ್ತೆ ಹರಿಹರ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ಸಂವಿಧಾನಬದ್ಧ ಹಾಗೂ ಕಾನೂನುಬದ್ಧ ಆಡಳಿತಾತ್ಮಕ ಚೌಕಟ್ಟಿನೊಳಗೆ ತಂದು, ಅದರ ಕಾರ್ಯ ಚಟುವಟಿಕೆಗಳಲ್ಲಿ ಸಾರ್ವಜನಿಕ ಉತ್ತರದಾಯಿತ್ವ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಖಚಿತಪಡಿಸುವಂತೆ ಆಗ್ರಹಿಸಿ ಇಲ್ಲಿನ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯಮಂತ್ರಿ, ಗೃಹ ಸಚಿವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ) ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ನಂತರ ಕ.ದ.ಸಂ.ಸ. ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಆರ್‌ಎಸ್‌ಎಸ್‌ನ ಕಾನೂನು ಮಾನ್ಯತೆ, ಅಧಿಕೃತ ನೋಂದಣಿ, ಹಣಕಾಸಿನ ಪಾರದರ್ಶಕತೆ ಹಾಗೂ ಸಾರ್ವಜನಿಕ ಉತ್ತರದಾಯಿತ್ವ ಕುರಿತು ಎತ್ತಿರುವ ಪ್ರಶ್ನೆಗಳು ಸಂವಿಧಾನ ಮತ್ತು ಕಾನೂನಿನ ಆಳ್ವಿಕೆಗೆ ಸಂಬಂಧಿಸಿದ ಸೂಕ್ತ ವಿಷಯಗಳಾಗಿವೆ ಎಂದರು.

ದೇಶದ ವಿವಿಧ ಟ್ರಸ್ಟ್‌ಗಳು, ಸ್ವಯಂ ಸೇವಾ ಸಂಸ್ಥೆಗಳು, ಕಾರ್ಮಿಕ ಸಂಘಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ಲೆಕ್ಕಪತ್ರ ಸಲ್ಲಿಸಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಲಕ್ಷಾಂತರ ಸದಸ್ಯರನ್ನು ಹೊಂದಿರುವ ಆರ್‌ಎಸ್‌ಎಸ್‌ನಂತಹ ಪ್ರಭಾವಿ ಸಂಘಟನೆಯ ಕಾನೂನುಬದ್ಧ ಸ್ವರೂಪ ಹಾಗೂ ಉತ್ತರದಾಯಿತ್ವದ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.

ಸಾರ್ವಜನಿಕ ಮೆರವಣಿಗೆಗಳು, ಶಿಬಿರಗಳು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರದ ಭದ್ರತೆ ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸುವ ಹಿನ್ನೆಲೆ, ಸಂಘಟನೆಯ ಸಂಘಟನಾ ರಚನೆ, ಜವಾಬ್ದಾರಿಯುತ ಪದಾಧಿಕಾರಿಗಳು, ಹಣಕಾಸಿನ ಮೂಲಗಳು, ಆಸ್ತಿ ಹಾಗೂ ವಾರ್ಷಿಕ ಲೆಕ್ಕಪತ್ರಗಳ ಬಗ್ಗೆ ಪಾರದರ್ಶಕ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದರು.

ಸಾರ್ವಜನಿಕ ಸೌಲಭ್ಯಗಳನ್ನು ಬಳಸುವ ಎಲ್ಲ ದೊಡ್ಡ ಸಂಘಟನೆಗಳಿಗೆ ಸಮಾನ ಮಾನದಂಡದ ನಿಯಂತ್ರಣ ವ್ಯವಸ್ಥೆ ರೂಪಿಸುವುದು ಹಾಗೂ ಸಂವಿಧಾನದ ಮೌಲ್ಯಗಳು, ಕಾನೂನಿನ ಆಳ್ವಿಕೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದ ತತ್ವಗಳನ್ನು ಎಲ್ಲ ಸಂಘಟನೆಗಳಿಗೂ ಸಮಾನವಾಗಿ ಅನ್ವಯಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರೇಡ್-2 ತಹಸೀಲ್ದಾರ್ ಪುಷ್ಪ ಮನವಿ ಸ್ವೀಕರಿಸಿದರು. ದಲಿತ ಮುಖಂಡರಾದ ಕಡ್ಲೆಗೊಂದಿ ತಿಮ್ಮಣ್ಣ, ಲೋಕೇಶ್, ಸಂಜೀವಪ್ಪ, ನಗರಸಭೆ ಮಾಜಿ ಸದಸ್ಯ ಎಂ.ಎಸ್.ಬಾಬುಲಾಲ್, ಎಂ.ಎಸ್.ಮಂಜುನಾಥ ಕೊಕ್ಕನೂರು, ಸಂತೋಷ್ ಹಿಂಡಸಘಟ್ಟ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹನುಮಂತಪ್ಪ, ಹಳ್ಳಿಹಾಳ್ ರಂಗನಾಥ್, ಮಂಜುನಾಥ್ ಎಚ್., ಕುಬೇರ ಗೌಡ್ರು, ಮಂಜುನಾಥ್ ಎನ್.ಎಚ್. ಹಾಗೂ ಇತರರು ಇದ್ದರು.

- - -

(ಕೋಟ್) ಯಾವುದೇ ಸಂಘಟನೆಯ ನಿಷೇಧವನ್ನು ಕೋರುವ ಉದ್ದೇಶ ಇಲ್ಲ. ಕಾನೂನಿನ ಮುಂದೆ ಸಮಾನತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದ ತತ್ವವನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂಬ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗಿದೆ.

- ಐರಣಿ ಹನುಮಂತಪ್ಪ, ಸಾಮಾಜಿಕ ಕಾರ್ಯಕರ್ತ, ಗುತ್ತೂರು.

- - -

-03HRR.01:

ಆರ್‌ಎಸ್‌ಎಸ್ ನೋಂದಣಿಗೆ ಆಗ್ರಹಿಸಿ ಕದಸಂಸ ಕಾರ್ಯಕರ್ತರು ಶುಕ್ರವಾರ ಹರಿಹರದ ತಹಸೀಲ್ದಾರ್ ಪುಷ್ಪ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಲಾಖೆಗಳ ಸಮನ್ವಯತೆಗೆ ಡ್ಯಾಶ್‌ಬೋರ್ಡ್‌ ರಚಿಸಿ
ಸ್ಪಿನ್ ಮಾಂತ್ರಿಕರಂತೆ ಮಾತುತಿರುಗಿಸುತ್ತಿರಾ: ಕೃಷ್ಣ ತರಾಟೆ