ಹಿರಿತನ, ಮೀಸಲಾತಿ ಆಧಾರದ ಮೇಲೆ ಮಂತ್ರಿ ಮಾಡಿ

KannadaprabhaNewsNetwork |  
Published : Nov 25, 2025, 03:15 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ಅಧಿಕಾರ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ಈ ವಿಚಾರ ನಿರ್ಲಕ್ಷಿಸಿದರೆ ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಬಹುದೊಡ್ಡ ಪೆಟ್ಟು ಬೀಳಲಿದೆ. ಪಕ್ಷಕ್ಕೆ ಡ್ಯಾಮೇಜ್ ಆಗುವುದರ ಜೊತೆಗೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ನಾವು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

ಕ ನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಚಿವ ಸಂಪುಟ ಪುನಾರಚನೆಯಲ್ಲಿ ಹಿರಿಯರಿಗೆ ಅನ್ಯಾಯ ಆಗಬಾರದು. ಮುಂಬೈ ಕರ್ನಾಟಕ ಭಾಗದಲ್ಲಿಯೇ ನಾನು ಅತ್ಯಂತ ಹಿರಿಯ ರಾಜಕಾರಣಿ. ಕಾರಣ ಹಿರಿತನ ಮತ್ತು ಲಿಂಗಾಯತ ಒಳಪಂಗಡ ಮೀಸಲಾತಿ ಆಧಾರದ ಮೇಲೆ ಈ ಬಾರಿ ನನ್ನನ್ನು ಮಂತ್ರಿಯನ್ನಾಗಿ ಮಾಡಿ ಎಂದು ಕೇಳುತ್ತಿದ್ದೇನೆ ಇದರಲ್ಲಿ ತಪ್ಪೇನಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

ಸೋಮವಾರ ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಧರ್ಮಸಿಂಗ್ ಅವರು ಮುಖ್ಯಂತ್ರಿಯಾಗಿದ್ದಾಗ ನನ್ನನ್ನು ಕರೆದು ನಿಮ್ಮನ್ನು ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಮಂತ್ರಿ ಸ್ಥಾನದ ಆಯ್ಕೆಯ ಅಂತಿಮ ಪಟ್ಟಿಯನ್ನು ದೆಹಲಿಗೆ ಕಳುಹಿಸಿದ್ದರು. ಬಳಿಕ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖುದ್ದಾಗಿ ಕರೆದು ನಿಮ್ಮನ್ನು ಇಂಧನ ಸಚಿವರನ್ನಾಗಿ ಮಾಡುತ್ತೇನೆ ಸಿದ್ಧರಾಗಿರಿ ಎಂದು ಭರವಸೆ ಕೊಟ್ಟಿದ್ದರು. ಆಗಲೂ ಕೊನೆಯ ಕ್ಷಣದಲ್ಲಿ ನನ್ನ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಯಿತು. ಅದರಂತೆ 2023ರ ಚುನಾವಣೆಯಲ್ಲಿ ಮತಪ್ರಚಾರ ಭಾಷಣದಲ್ಲಿ ಸಿದ್ದರಾಮಯ್ಯನವರು ಮತ್ತೆ ಈ ಬಾರಿ ನಾಡಗೌಡರನ್ನು ಗೆಲ್ಲಿಸಿದರೇ ಕ್ಯಾಬಿನೆಟ್ ಮಂತ್ರಿಯಾಗಿ ಮಾಡುತ್ತೇನೆ ಎಂದು ಮತಕ್ಷೇತ್ರದ ಜನರಿಗೆ ಭರವಸೆ ಕೊಟ್ಟಿದ್ದರು. ಅದು ಕೂಡ ಈಡೇರಲಿಲ್ಲ ಎಂದು ನೊಂದು ಹೇಳಿದರು.

ನನ್ನ ಸಹಕಾರ ಪಡೆದವರು ಋಣ ತೀರಿಸುವ ಬದಲಾಗಿ ನನ್ನ ರಾಜಕೀಯದಲ್ಲಿ ಅದರಲ್ಲೂ ನನಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಪ್ರತಿ ಬಾರಿಯೂ ಕಾಣದ ಕೈಗಳು ಕಾಲೆಳೆಯವ ಭಾರಿ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಸಂಶಯ ವ್ಯಕ್ತವಾಗತೊಡಗಿದೆ. ಎಲ್ಲರಿಗೂ ನಾನು ಸಹಕಾರ ನೀಡಿದ್ದೇನೆ. ಹಾಗಂತ ಯಾರ ವಿರುದ್ಧವೂ ಆರೋಪಿಸುತ್ತಿಲ್ಲ. ಸುಮಾರು 40 ವರ್ಷಗಳ ಕಾಲ ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ ಒಂದು ಗೌರವ ಸಿಗಲಿ ಎಂಬುದು ನನ್ನದು ಮಾತ್ರವಲ್ಲ, ನಮ್ಮ ಮತಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತರ, ಮತದಾರರ ಆಸೆಯಾಗಿದೆ ಎಂದರು.

ಸರ್ಕಾರ ರಚನೆಯಲ್ಲಿ ಮೀಸಲಾತಿಯಡಿ ಆಯ್ಕೆ ಮಾಡುವ ಸಂದರ್ಭದಲ್ಲಿ ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ನಮ್ಮ ಸಮುದಾಯದೊಳಗೆ ಮೀಸಲಾತಿ ತರುತ್ತಿರುವುದೊ ರಿಂದ ಮುಂಬೈ ಕರ್ನಾಟಕ ಭಾಗದ ಹಿರಿಯನಾದ ನನಗೆ ಅನ್ಯಾಯ ಮಾಡಲಾಗುತ್ತಿದೆ. ಈ ಹಿಂದೆ ನಮ್ಮ ಜಿಲ್ಲೆಯಿಂದ ಮೂವರು ಜನ ಮಂತ್ರಿಗಳಾಗುತ್ತಿದ್ದರು. ಇದೀಗ ರಾಜಕೀಯ ಷಡ್ಯಂತರದಿಂದ ಪ್ರತಿ ಬಾರಿಯೂ ಮಂತ್ರಿ ಸ್ಥಾನದಿಂದ ವಂಚಿತನಾಗುತ್ತಿದ್ದೇನೆ. ಇದರಿಂದ ಪಕ್ಷದ ವರಿಷ್ಠರ ಮೇಲೆ ಹಾಗೂ ಸರ್ಕಾರದ ಮತಕ್ಷೇತ್ರದ ಕಾರ್ಯಕರ್ತರು, ಮುಖಂಡರು ವಿಶ್ವಾಸ ಕಳೆದುಕೊಂಡು ಅವಕಾಶವಿದ್ದ ಕಡೆ ಮಾರ್ಗ ಬೆಳೆಸಿ ಪಕ್ಷಕ್ಕೆ ಹಾನಿಯಾಗುವ ಸಂದರ್ಭಗಳು ಕಾಣ ಬೇಕಾಗುತ್ತದೆ. ನಮ್ಮಂತಹ ಹಿರಿಯರನ್ನು ಸಂಪುಟದಿಂದ ಹಿಂದಿಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಈಗಲಾದರೂ ನಮ್ಮ ನಿರ್ಲಕ್ಷ್ಯ ತೊರದೇ ನಮಗೂ ಅಧಿಕಾರ ನೀಡಲಿ ಆ ಭರವಸೆಯಲ್ಲಿ ನಾನಿದ್ದೇನಿದ್ದೇನೆ ಎಂದು ಹೇಳಿದರು.

ಅಧಿಕಾರ ಹಂಚಿಕೆ ವಿಚಾರ ನಿರ್ಲಕ್ಷಿಸಿದರೆ ಪಕ್ಷಕ್ಕೆ ಡ್ಯಾಮೇಜ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವರು ರಾಜ್ಯ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ನಾಯಕರಾಗಿದ್ದಾರೆ. ಪಕ್ಷದ ಹಾಗೂ ಅಧಿಕಾರ ಹಂಚಿಕೆ ಸೇರಿದಂತೆ ಅನೇಕ ಆಂತರಿಕ ವಿಚಾರಗಳು ಸಾರ್ವಜನಿಕರ ಬಾಯಲ್ಲಿ ಬರದಂತೆ ನೋಡಿಕೊಳ್ಳಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ ಇಬ್ಬರೂ ನಾಯಕರನ್ನು ಒಂದೆ ವೇದಿಕೆಯಡಿ ಕರೆದು ಕೂಡಿಸಿ ಪರಸ್ಪರ ಹೊಂದಾಣಿಕೆ ಮೂಲಕ ಇತ್ಯರ್ಥಗೊಳಿಸಿ ಅಂತ್ಯ ಹಾಡಬೇಕಿದೆ. ಇಲ್ಲವಾದರೇ ಸದ್ಯ ಅಧಿಕಾರ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್‌ ಈ ವಿಚಾರ ನಿರ್ಲಕ್ಷಿಸಿದರೆ ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಬಹುದೊಡ್ಡ ಪೆಟ್ಟು ಬೀಳಲಿದೆ. ಪಕ್ಷಕ್ಕೆ ಡ್ಯಾಮೇಜ್ ಆಗುವುದರ ಜೊತೆಗೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ನಾವು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧೂಮಪಾನಕ್ಕಿಂತಲೂ ಇದು ಡೇಂಜರ್ : ಸಾವನ್ನಪ್ಪಿದವರು ಅಧಿಕ
ಶ್ರೀಮಠದಲ್ಲಿ ಗುರುಶಾಂತವೀರ ಶ್ರೀಗಳ ಅಂತ್ಯಕ್ರಿಯೆ