ಕಾರವಾರ: ಜಿಲ್ಲೆಯಲ್ಲಿ ನ. 1ರಂದು ಕನ್ನಡ ರಾಜ್ಯೋತ್ಸವವನ್ನು ವ್ಯವಸ್ಥಿತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಪೊಲೀಸ್ ಪರೇಡ್ ಮೈದಾನದವರೆಗೆ ಕನ್ನಡಾಂಬೆಯ ಭಾವಚಿತ್ರ ಮೆರವಣಿಗೆಯನ್ನು ವಿವಿಧ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ಏರ್ಪಡಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ಜಿಪಂ, ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಗೆ, ಬಂದರು ಇಲಾಖೆ ಮತ್ತು ನಗರಸಭೆ ವತಿಯಿಂದ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯೋತ್ಸವ ಪ್ರಯುಕ್ತ ಎಲ್ಲ ಸರ್ಕಾರಿ ಕಚೇರಿಗಳಿಗೆ ಮತ್ತು ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ಪೊಲೀಸ್ ಕವಾಯತು ಮೈದಾನದಲ್ಲಿ ಧ್ವಜಾರೋಹಣ ಮತ್ತು ಪಥ ಸಂಚಲನ ಕಾರ್ಯಕ್ರಮಕ್ಕೆ ಅಗತ್ಯ ತಯಾರಿ ಕೈಗೊಳ್ಳಬೇಕು ಎಂದರು.ಮೆರವಣಿಗೆಯಲ್ಲಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್, ಎನ್‌ಸಿಸಿ, ಗೃಹರಕ್ಷಕ ದಳ ಸೇರಿದಂತೆ ಎಲ್ಲರೂ ಪಾಲ್ಗೊಳ್ಳುವಂತೆ ನಿರ್ದೇಶನ ನೀಡಿದರು. ಉಪ ವಿಭಾಗಾಧಿಕಾರಿ ಕನಿಷ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕಾರವಾರದಲ್ಲಿ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರವಾರ: ಬ್ರಿಟಿಷರಿಂದ ಬಂದ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಪೊಲೀಸರ ಪಾತ್ರ ಹೆಚ್ಚಿನದ್ದಾಗಿದೆ. ಈ ಅಮೂಲ್ಯ ಸೇವೆಯಲ್ಲಿ ಹುತಾತ್ಮರಾದವರನ್ನು ನೆನೆಯಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ಅಭಿಪ್ರಾಯಪಟ್ಟರು.ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ಸಂಸ್ಮರಣಾ(ಹುತಾತ್ಮರ) ದಿನಾಚರಣೆಯಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿ, ಪೊಲೀಸರ ರಕ್ಷಣೆ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದರು.ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್ ಎ.ಕೆ. ಶರ್ಮಾ ಮಾತನಾಡಿ, ಸೇನೆ ಹಾಗೂ ಪೊಲೀಸರ ಸಮವಸ್ತ್ರ ಬೇರೆಯಾಗಿರಬಹುದು. ಆದರೆ ಇಬ್ಬರ ಉದ್ದೇಶವೂ ದೇಶಸೇವೆ ಮಾಡುವುದು ಹಾಗೂ ಜನರ ರಕ್ಷಣೆ ಮಾಡುವುದಾಗಿದೆ ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ನಮ್ಮ ಜಿಲ್ಲೆ ವಿಸ್ತಾರವಾಗಿದ್ದು, ಸಮುದ್ರ ಪ್ರದೇಶ ಹಾಗೂ ಭೂ ಪ್ರದೇಶವನ್ನು ಹೊಂದಿದೆ. ಎರಡೂ ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಅವರ ಸೇವೆ ಅಪಾರವಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠ ನಾರಾಯಣ ಎನ್., ಪೊಲೀಸ್ ಹುತಾತ್ಮ ದಿನಾಚರಣೆಯ ಇತಿಹಾಸ ತಿಳಿಸಿ, ೨೦೨೪ನೇ ಸಾಲಿನಲ್ಲಿ ದೇಶಾದ್ಯಂತ ಹುತಾತ್ಮರಾದ ೨೧೪ ಪೊಲೀಸ್ ಅಧಿಕಾರಿಗಳನ್ನು ನೆನೆದರು.ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ವಂದನೆ ಸಲ್ಲಿಸಿದರು. ಕುಶಾಲತೋಪು ಹಾರಿಸಿ ಮೌನಾಚರಣೆ ಮಾಡುವ ಮೂಲಕ ಹುತಾತ್ಮರನ್ನು ಗೌರವಿಸಲಾಯಿತು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ, ಕಮಾಂಡೆಂಟ್ ಕಿರಣಕುಮಾರ ಸಿನ್ಹಾ ಇದ್ದರು.