ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಮತದಾರರಲ್ಲಿ ಅರಿವು ಮೂಡಿಸಲು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಸರ್ಕಾರ ಯೋಜನೆಗಳು ಜನತೆಗೆ ತಿಳಿಯಲಿದೆ ಮತ್ತು ಪಕ್ಷ ಸಂಘಟನೆ ಪ್ರಬಲವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿಯೂ ಆಗಿರುವ ಮಾಜಿ ಶಾಸಕ ಜೆ.ಆರ್.ಲೋಬೋ ತಿಳಿಸಿದ್ದಾರೆ.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸರಕಾರದ ಕಾರ್ಯಕ್ರಮಗಳನ್ನು ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಾಟ್ಸಪ್, ಟ್ವಿಟರ್, ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಮತ್ತಿತರ ಮೂಲಗಳಲ್ಲಿ ಪ್ರಚಾರ ಕೈಗೊಳ್ಳಬೇಕು. ಪತ್ರಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಪರ ಲೇಖನಗಳನ್ನು ನೀಡಬೇಕು. ಪಕ್ಷದ ಕಾರ್ಯಕ್ರಮಗಳನ್ನು ಜನ ಸಮೂಹಕ್ಕೆ ತಿಳಿಹೇಳುವ ಉತ್ತಮ ಭಾಷಣಕಾರರನ್ನು ಕಲೆಹಾಕಿ ತರಬೇತಿ ನೀಡಿ ಕಾರ್ಯಾಗಾರ ನಡೆಸಬೇಕು. ಆ ಮೂಲಕ ಪ್ರಚಾರ ಸಮಿತಿ ತನ್ನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮುಂಬರುವ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಚುನಾವಣೆಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸನ್ನದ್ಧರಾಗಬೇಕು. ಆ ನಿಟ್ಟಿನಲ್ಲಿ ಪ್ರಚಾರ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಜಿಲ್ಲಾ ಕಾಂಗ್ರೆಸ್ ನೊಂದಿಗೆ ಕಾರ್ಯನಿರ್ವಹಿಸಬೇಕು. ಇತರ ಪಕ್ಷಗಳ ಅಪಪ್ರಚಾರ ಮತ್ತು ಟೀಕೆಗಳಿಗೆ ಸರಿಯಾದ ಪ್ರತ್ಯುತ್ತರವನ್ನು ಪ್ರಚಾರ ಸಮಿತಿ ನೀಡಬೇಕಾಗಿದೆ ಎಂದು ತಿಳಿಸಿದರು.ಅವರು ಅ.29 ರಂದು ರಾಜ್ಯ ಪ್ರಚಾರ ಸಮಿತಿಯ ಸಭೆ ನಡೆಯಲಿದ್ದು, ಅಷ್ಟರೊಳಗೆ ನೂತನ ಬ್ಲಾಕ್ ಸಮಿತಿ ರಚಿಸಬೇಕೆಂದು ಹೇಳಿದರು.ಪ್ರಚಾರದ ಕೊರತೆಯಿಂದ ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಮತದಾರರಿಗೆ ತಿಳಿಯುತ್ತಿಲ್ಲ. ಬೂತ್ ಮಟ್ಟದಿಂದ ಪ್ರಚಾರ ಆರಂಭಿಸಿದರೆ ಜನಜಾಗೃತಿ ಉಂಟಾಗಿ ಪಕ್ಷದ ಬಲವರ್ಧನೆಯಾಗಲಿದೆ. ಮುಂದಿನ ದಿನಗಳಲ್ಲಿ ಪ್ರಚಾರ ಸಮಿತಿಯ ಮೂಲಕ ಕಾರ್ಯಕರ್ತರಿಗೆ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಡೆಸುವುದಾಗಿ ತಿಳಿಸಿದರು.ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಬ್ಲಾಕ್ ಅಧ್ಯಕ್ಷರುಗಳಾದ ಲಾರೆನ್ಸ್, ಎ.ಕೆ.ಹಕೀಂ, ವಿ.ಜಿ.ಮೋಹನ್, ಮತೀನ್, ಟಾಟು ಮೊಣ್ಣಪ್ಪ, ಪೆರುಮುಂಡನ ಮನು, ಹಿರಿಯ ನಾಯಕರಾದ ಎರ್ಮುಹಾಜಿ, ಪ್ರಮುಖರಾದ ರವೂಫ್, ಸುನಿಲ್ ಪತ್ರಾವೊ ಮತ್ತಿತರರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಹಿರಿಯ ನಾಯಕರಾದ ಎಸ್.ಎಂ.ಚಂಗಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಹಂಸ, ಪ್ರಮುಖರಾದ ಜುಲೇಕಾಬಿ, ಅಗಸ್ಟಿನ್ ಜಯರಾಜ್, ಪುಷ್ಪ ಪೂಣಚ್ಚ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮೋಹನ್ ಮೌರ್ಯ ನಿರೂಪಿಸಿ, ವಂದಿಸಿದರು.