ಕನ್ನಡಪ್ರಭ ವಾರ್ತೆ ಹುಣಸೂರು
ವಿದ್ಯಾರ್ಥಿಗಳು ಮತದಾನದ ಅರಿವು ಕುರಿತಾಗಿನ ರೀಲ್ಸ್ ಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಕೈಜೋಡಿಸಲಿ ಎಂದು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಕರೆ ನೀಡಿದರು.ಗುರುವಾರ ನಗರದ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಸ್ವೀಪ್ ಸಮಿತಿ ಮತ್ತು ನಗರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ದೇಶದ ಭವಿಷ್ಯವನ್ನು ಸುಭದ್ರಗೊಳಿಸುವ ಮಹತ್ತರ ಜವಾಬ್ದಾರಿಯನ್ನು ಯುವಸಮೂಹ ಹೊರಬೇಕಿದೆ. ಆಧುನಿಕ ಜೀವನ ಶೈಲಿನ ಅವಿಭಾಜ್ಯ ಅಂಗವಾಗಿರುವ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಯುವಸಮೂಹ ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದೆ. ಮತದಾನದ ಅಗತ್ಯತೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯು ಸಾರ್ವಜನಿಕರಿಗೆ ರೀಲ್ಸ್ ಮಾಡುವ ಅವಕಾಶ ನೀಡಿದೆ. ರೀಲ್ಸ್ ನಲ್ಲಿ ಮತದಾನದ ಮಹತ್ವ, ಪ್ರತಿ ವೋಟಿನ ಮೌಲ್ಯ, ನೈತಿಕ ಮತದಾನ ಮತ್ತು ಎಲ್ಲಾ ವರ್ಗಗಳನ್ನು ಪ್ರತಿಬಿಂಬಿಸುವ ವೀಡಿಯೋಗಳನ್ನು ಗರಿಷ್ಟ 40 ರಿಂದ 60 ಸೆಕೆಂಡ್ ಅವಧಿಯ ಒಳಗೆ ರೀಲ್ಸ್ ಗಳನ್ನು ಮಾಡಿ sveepmysuru2018@gmail.com ಗೆ ಕಳುಹಿಸಬಹುದು.ರೀಲ್ಸ್ ಕಳುಹಿಸಲು ಏ. 10 ಅಂತಿಮದಿನ. ಉತ್ತಮ ಸಂದೇಶವುಳ್ಳ ಆಯ್ದ ಮೂರು ರೀಲ್ಸ್ ಮತ್ತು ವೀಡಿಯೋಗಳನ್ನು ರಚಿಸಿದವರಿಗೆ ಸೂಕ್ತ ಬಹುಮಾನ ವಿತರಿಸಲಾಗುವುದು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಸುಭದ್ರ ಜೀವನಕ್ಕಾಗಿ ಪ್ರತಿನಿತ್ಯ ಓದುವುದು ಎಷ್ಟು ಮುಖ್ಯವೋ, ಹಾಗೆಯೇ ಮುಂದಿನ 5 ವರ್ಷ ದೇಶದ ಭದ್ರತೆ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಏ. 26 ರಂದು ಕಡ್ಡಾಯವಾಗಿ ತಮ್ಮ ಹಕ್ಕನ್ನು ಪ್ರತಿಪಾದಿಸಿ ಎಂದರು.
ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ಸ್ವಾತಂತ್ರ್ಯ ಬರುವುದಕ್ಕೂ ಹಿಂದೆ ಯಾವುದೇ ಹಕ್ಕುಗಳು ನಮ್ಮ ಜನರಿಗೆ ಧಕ್ಕಿರಲಿಲ್ಲ. ಆದರೆ ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮಾರ್ಪಾಡಾಗಿದ್ದು, ಯಾವುದೇ ಜಾತಿ, ಜನಾಂಗವಿರಲಿ ಪ್ರತಿಯೊಬ್ಬರಿಗೂ ಶಿಕ್ಷಣ, ಸಮಾನತೆ, ಮತದಾನ ಹಕ್ಕು ಹೀಗೆ ಹಲವಾರು ವಿಶೇಷತೆಗಳು ನಮಗೆ ದೊರೆತಿದೆ. ಹೀಗಾಗಿ ಸ್ವಾತಂತ್ರ್ಯ ಬಂದು 76 ವರ್ಷದಲ್ಲಿ ಉತ್ತಮವಾದ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಇಂತಹ ಒಂದು ಹಕ್ಕನ್ನು ತಂದುಕೊಟ್ಟಿರುವ ನಮ್ಮ ದೇಶದ ಸುಭದ್ರತೆಗಾಗಿ ಪ್ರತಿ 5 ವರ್ಷಗಳಿಗೊಮ್ಮೆ ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸುವ ಮಹತ್ವಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ಸಿ- ವಿಜಿಲ್ ಆಪ್, ವೋಟರ್ ಹೆಲ್ಪ್ ಲೈನ್ ಆಪ್ ಮತ್ತು ಸಕ್ಷಮ್ ಆಪ್ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ. ನಯನಾ, ತಾಪಂ ವ್ಯವಸ್ಥಾಪಕ ಮಹೇಶ್ ನಾಯಕ್, ಪ್ರಭಾರ ಪ್ರಾಂಶುಪಾಲೆ ನೀತು ಸಂತೋಷ್, ನಗರಸಭೆ ನೋಡಲ್ ಎಂಜಿನಿಯರ್ ಸೋಮಸುಂದರಂ, ಸಂತೋಷ್ ಕುಮಾರ್ ಸೇರಿದಂತೆ ತಾಪಂ ಮತ್ತು ನಗರಸಭೆ ಸಿಬ್ಬಂದಿ, ಕಾಲೇಜು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಕಡ್ಡಾಯ ಮತದಾನದ ಕುರಿತಾಗಿನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.