ಶಿರಸಿ:
ಅತಿಥಿ ಉಪನ್ಯಾಸಕರನ್ನು ಯುಜಿಸಿ ನಿಯಮಾವಳಿಗಳ ಪ್ರಕಾರವೇ ನೇಮಕ ಮಾಡಿಕೊಂಡಿದ್ದು, ರಾಜ್ಯದಲ್ಲಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಕಾಯಮಾತಿ ಮಾಡಿಕೊಳ್ಳುವ ಲಿಖಿತ ಭರವಸೆಯನ್ನು ಸರ್ಕಾರ ನೀಡುವ ತನಕ ಹೋರಾಟ ಮುಂದುವರಿಯಲಿದೆ ಎಂದು ಅತಿಥಿ ಉಪನ್ಯಾಸಕರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹನುಮಂತ ಗೌಡ ಹೇಳಿದರು.ಇಲ್ಲಿನ ಯೋಗ ಮಂದಿರದಲ್ಲಿ ಸುದ್ದಿಯೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯದ 32 ಜಿಲ್ಲೆಗಳಿಂದ 12 ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಕೂಡ ನಮ್ಮನ್ನು ಅಂಗೈಯಲ್ಲಿ ಆಡಿಸುತ್ತಿದೆ. ಕಾಯಮಾತಿ ಮಾಡುವ ಭರವಸೆ ನೀಡುತ್ತಾರೆಯೇ ಹೊರತು ಮಾಡುವುದಿಲ್ಲ. ಹೀಗಾಗಿ ಸರ್ಕಾರ ಕಾಯಮಾತಿ ಮಾಡಿ ನೇಮಿಸಿಕೊಳ್ಳುವ ಲಿಖಿತ ಪತ್ರ ನೀಡಿದರೆ ನಮ್ಮ ಧರಣಿ ಸ್ಥಗಿತಗೊಳಿಸುತ್ತೇವೆ ಎಂದರು.
ಸರ್ಕಾರ ಒಮ್ಮೆಲೇ 12 ಸಾವಿರ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು ಎನ್ನುವ ಒತ್ತಾಯವಿಲ್ಲ. ಆದರೆ ಹಂತ-ಹಂತವಾಗಿಯಾದರೂ ಎಲ್ಲ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು. ಈ ಕುರಿತು ಉನ್ನತ ಶಿಕ್ಷಣ ಸಚಿವರು ಆದೇಶ ಹೊರಡಿಸಿ ಲಿಖಿತವಾಗಿ ಪತ್ರ ನೀಡಬೇಕು ಎನ್ನುವುದೇ ನಮ್ಮ ಹೋರಾಟದ ಉದ್ದೇಶ ಎಂದು ತಿಳಿಸಿದರು.ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ವಯೋಮಿತಿ ಮೀರಿರುವ/ಮೀರುತ್ತಿದ್ದವರು ಇದ್ದಾರೆ. ಈಗ ಅತಿಥಿ ಉಪನ್ಯಾಸಕರಿಗೆ ಸೇವಾ ಕಾಯಮಾತಿ ಇಲ್ಲದೆ ನಮ್ಮೆಲ್ಲರ ಬದುಕು ಅಭದ್ರತೆಯಲ್ಲಿದೆ. ಸರ್ಕಾರ ಈ ಹಿಂದೆ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರನ್ನು, ಅರೆಕಾಲಿಕೆ, ಸ್ಟಾಪ್ ಗ್ಯಾಪ್ ಅತಿಥಿ ಉಪನ್ಯಾಸಕರನ್ನು, ಜೆಪಿಸಿ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ದಿನಗೂಲಿ ನೌಕರರನ್ನು, ಪೌರ ಕಾರ್ಮಿಕ ನೌಕರರನ್ನು, ಆರೋಗ್ಯ ಇಲಾಖೆಯಲ್ಲಿನ ಗುತ್ತಿಗೆ ಆಧಾರದ ಮೇಲಿರುವ ವೈದ್ಯರನ್ನು ಅರೆ ವೈದ್ಯಕೀಯ ಸಿಬ್ಬಂದಿ ವರ್ಗ ಮತ್ತು ವಾಹನ ಚಾಲಕ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರಿಗೆ ಕಾಯಮಾತಿ ನೀಡಲು ತೆಗೆದುಕೊಂಡ ದೃಢ ನಿರ್ಧಾರವನ್ನು ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ವಿಷಯದಲ್ಲೂ ಕೂಡ ತೆಗೆದುಕೊಳ್ಳಬೇಕಾಗಿದೆ ಎಂದು ಹನುಮಂತ ಗೌಡ ಒತ್ತಾಯಿಸಿದರು.
ಇದಕ್ಕೂ ಮುನ್ನ ಅತಿಥಿ ಉಪನ್ಯಾಸಕರು ನಗರದ ಮಾರಿಕಾಂಬಾ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಶಿರಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ವೇಳೆಯಲ್ಲಿ ಅತಿಥಿ ಉಪನ್ಯಾಸಕರ ಸಮಿತಿಯ ಪ್ರತಿಭಾ ಭಟ್ಟ, ವಿನಾಯಕ ಭಟ್ಟ, ದಾನೇಶ್ವರಿ, ಪೀಟರ್ ಮತ್ತಿತರರು ಇದ್ದರು.